ಐಸಿಜೆಯಲ್ಲಿ ಪಾಕ್‌ನಿಂದ ನಿಂದನಾತ್ಮಕ ಭಾಷೆಯ ಬಳಕೆಗೆ ಭಾರತದ ಆಕ್ಷೇಪ

Update: 2019-02-20 17:45 GMT

ದಿ ಹೇಗ್,ಫೆ.20: ಇಲ್ಲಿಯ ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿ ಕುಲಭೂಷಣ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ವಕೀಲರು ಬಳಸಿರುವ ನಿಂದನಾತ್ಮಕ ಭಾಷೆಗೆ ಭಾರತವು ಬುಧವಾರ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಬಳಸಲಾಗುವ ಭಾಷೆಯ ಬಗ್ಗೆ ಕೆಲ ನಿರ್ಬಂಧಗಳನ್ನು ವಿಧಿಸುವಂತೆ ಅದು ನ್ಯಾಯಾಲಯವನ್ನು ಆಗ್ರಹಿಸಿದೆ.

ಐಸಿಜೆ ಎದುರು ಭಾರತದ ಪರ ವಾದವನ್ನು ಮಂಡಿಸಿದ ಸಂದರ್ಭದಲ್ಲಿ ಮಾಜಿ ಸಾಲಿಸಿಟರ್ ಜನರಲ್ ಹರೀಶ ಸಾಳ್ವೆ ಅವರು,ವಿಚಾರಣೆಯ ಎರಡನೇ ದಿನ ಪಾಕಿಸ್ತಾನವು ತನ್ನ ವಕೀಲ ಖವರ್ ಕುರೇಷಿ ಅವರ ಮೂಲಕ ಬಳಸಿದ ನಿಂದನಾತ್ಮಕ ಭಾಷೆಯತ್ತ ನ್ಯಾಯಾಲಯದ ಗಮನವನ್ನು ಸೆಳೆದರು.

 ನ್ಯಾಯಾಲಯದಲ್ಲಿ ಪ್ರತಿಧ್ವನಿಸಿದ ಭಾಷೆ ಹೇಗಿತ್ತೆಂದರೆ ಈ ನ್ಯಾಯಾಲಯವು ಕೆಲವು ನಿರ್ಬಂಧಗಳನ್ನು ವಿಧಿಸಬೇಕಾಗಬಹುದು. ಲಜ್ಜೆಗೇಡಿ,ಮೂರ್ಖತನದಂತಹ ಶಬ್ದಗಳನ್ನು ಲಿಪ್ಯಂತರದಲ್ಲಿ ಬಳಸಲಾಗಿದೆ. ಅಂತರರಾಷ್ಟ್ರಿಯ ನ್ಯಾಯಾಲಯದಲ್ಲಿ ಈ ರೀತಿಯಲ್ಲಿ ಕರೆಯಲ್ಪಡುವುದನ್ನು ಭಾರತವು ಆಕ್ಷೇಪಿಸುತ್ತದೆ ಎಂದರು.

ಐಸಿಜೆ ಜಾಧವ್ ಪ್ರಕರಣದಲ್ಲಿ ಎರಡನೇ ಸುತ್ತಿನ ವಿಚಾರಣೆಯನ್ನು ಆರಂಭಿಸಿದೆ.

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರಿಗೆ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಗಳಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಮರಣ ದಂಡನೆಯನ್ನು ವಿಧಿಸಿದ್ದು,ಇದನ್ನು ಭಾರತವು ಐಸಿಜೆಯಲ್ಲಿ ಪ್ರಶ್ನಿಸಿದೆ.

ಐಸಿಜೆಯ ತೀರ್ಪು ಈ ವರ್ಷದ ಬೇಸಿಗೆಯಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News