ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡುವ ಶಕ್ತಿ ಕೇಂದ್ರ ಸರಕಾರಕ್ಕಿದೆ: ಅವಿನಾಶ್ ರಾಯ್ ಖನ್ನಾ

Update: 2019-02-20 16:59 GMT

ಪುತ್ತೂರು, ಫೆ. 20: ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಶಕ್ತಿ ಇರುವ ಮೂರು ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದು. ಅಮೇರಿಕಾ, ಇಸ್ರೇಲ್‍ಗಳಂತೆ ಪ್ರಧಾನಿ ಮೋದಿ ಭಾರತದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತವೂ ಕೂಡಾ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದೆ. ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡುವ ಶಕ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇದೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಪಂಜಾಬ್ ಸಂಸದ ಅವಿನಾಶ್ ರಾಯ್ ಖನ್ನಾ ಹೇಳಿದರು.

ಅವರು ಪುತ್ತೂರಿನಲ್ಲಿ ಬಿಜೆಪಿ ಆಶ್ರಯದಲ್ಲಿ ಬುಧವಾರ ಸಂಘಟಿಸಲಾದ ಸಮಾಜದ ವಿವಿಧ ವೃತ್ತಿ ನಿರತರ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದರು. ನೀತಿ, ನಿಯತ್ತು, ಕೆಲಸ ಮಾಡುವ ಇಚ್ಛಾಶಕ್ತಿ ಹಾಗೂ ಬಲಿಷ್ಠ ನಾಯಕತ್ವ ಬಿಜೆಪಿ ಬಳಿ ಮಾತ್ರ ಇದೆ. ವಿರೋಧ ಪಕ್ಷದವರ ಬಳಿ ಅವರ ನಾಯಕ ಯಾರು ಎಂದು ಕೇಳಿದರೆ ಈಗಲೂ ಉತ್ತರವಿಲ್ಲ ಎಂದರು.

ಕಳೆದ 5ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಮೋದಿ ಸರಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವ ಮೂಲಕ ಜನಸಾಮಾನ್ಯರ ಸರಕಾರ ವಾಗಿ ದೇಶದ ಪ್ರೀತಿ ಗಳಿಸಿದೆ. ಜನಸಾಮಾನ್ಯರ ಮನೆ ಬಾಗಿಲಿಗೆ ಸರಕಾರ ತಲುಪಿದೆ. ಇವೆಲ್ಲದರ ನಡುವೆ ಆರ್ಥಿಕ ಮಟ್ಟದ ಅಭಿವೃದ್ಧಿಯಲ್ಲೂ ಭಾರತ ಹಿಂದೆ ಬಿದ್ದಿಲ್ಲ. ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದೆ ಎಂದರು.

ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಭಾರತವು ಸೂಪರ್ ಪವರ್ ಆಗಲು ನರೇಂದ್ರ ಮೋದಿ ಅವರ ನಾಯಕತ್ವ ಮತ್ತೊಮ್ಮೆ ದೇಶ ಬಯಸಿದೆ. ಸಮಾಜದ ಎಲ್ಲಾ ವರ್ಗದವರ ಸಹಕಾರ ಇದಕ್ಕೆ ಅಗತ್ಯ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ನೀತಿಯನ್ನು ನಿಜ ಅರ್ಥದಲ್ಲಿ ಸಾಕಾರಗೊಳಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಮುಂದಿನ ಅವಧಿಯಲ್ಲಿ ಯಾವ ಕೆಲಸವನ್ನು ಮಾಡಬೇಕು ಎಂಬ ಪ್ರಜಾ ಅಭಿಪ್ರಾಯವನ್ನು ಸಂಗ್ರಹಿ ಸುವ ಕೆಲಸವನ್ನು ಬಿಜೆಪಿ ಆರಂಭಿಸಿದೆ ಎಂದು ವಿವರಿಸಿದರು. ಬಳಿಕ ನಡೆದ ಸಂವಾದದಲ್ಲಿ ಪ್ರಮುಖರಾದ ಪಿ. ವಾಮನ ಪೈ, ಡಾ. ದೀಪಕ್ ರೈ, ಸಿವಿಲ್ ಇಂಜಿನಿಯರ್ ವಸಂತ ಭಟ್, ನ್ಯಾಯವಾದಿ ಕೆ. ಜಯಾನಂದ ಸಹಿತ ವಿವಿಧ ಗಣ್ಯರು ಪಾಲ್ಗೊಂಡರು. ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು. 

ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ ಜೈನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News