ಸಾಮಾಜಿಕ ಜಾಲತಾಣದ ದ್ವೇಷದ ಮಾತುಗಳು ಬಹುಮತದ ಅಭಿಪ್ರಾಯವಲ್ಲ: ಅಜಯ್ ದೇವಗನ್

Update: 2019-02-20 17:01 GMT

 ಹೊಸದಿಲ್ಲಿ, ಫೆ.20: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದ್ವೇಷದ ಮಾತಿನಂತಹ ಕೆಲವು ದಾರಿತಪ್ಪಿಸುವ ಘಟನೆಗಳು ಬಹುಮತದ ಅಭಿಪ್ರಾಯ ಎನ್ನಲಾಗದು. ಸಮಸ್ಯೆಯನ್ನು ಸೃಷ್ಟಿಸಲು ಯತ್ನಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ಹಿಂದಿ ನಟ ಅಜಯ್ ದೇವಗನ್ ಹೇಳಿದ್ದಾರೆ.

ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯ ಬಳಿಕ ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಹಾಗೂ ಜನರಿಗೆ ದೇಶದ ವಿವಿಧೆಡೆ ಕಿರುಕುಳ ನೀಡುತ್ತಿರುವ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಕಾಶ್ಮೀರ ವಿದ್ಯಾರ್ಥಿಗಳ ಮತ್ತು ಜನತೆಯ ಸುರಕ್ಷತೆ ಮತ್ತು ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಇಡೀ ದೇಶದ ಜನತೆ ಈ ರೀತಿ ಮಾಡುತ್ತಾರೆ ಎಂದು ಹೇಳಲಾಗದು. ಕೆಲವು ಜನರಿಗೆ ಸಮಸ್ಯೆ ಸೃಷ್ಟಿಸುವುದರಲ್ಲಿ ವಿಶೇಷ ಆನಂದ ದೊರಕುತ್ತದೆ. ಇಂತಹ ಘಟನೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವರದಿಯನ್ನು ಗಮನಿಸಿ, ಇಡೀ ದೇಶವೇ ಕೊಳಕು ಎನ್ನಲಾಗದು ಎಂದು ದೇವಗನ್ ಹೇಳಿದರು.

 ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಯ ಬಗ್ಗೆ ನಾವು ಜಾಗರೂಕರಾಗಿರಬೇಕು. ಯಾವುದು ಸತ್ಯವೋ ಅವನ್ನು ಮಾತ್ರ ಸ್ವೀಕರಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವೊಂದು ಕೆಡುಕುಗಳಿವೆ ಮತ್ತು ಜನರೇ ಈ ಬಗ್ಗೆ ನಿರ್ಧರಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

 ಸಿನೆಮದ ಬಗ್ಗೆ ಉಲ್ಲೇಖಿಸಿದ ಅವರು, ನಾವು ಯಾವುದೇ ಧರ್ಮ ಅಥವಾ ಪಂಗಡದ ಬಗ್ಗೆ ತಮಾಷೆ ಮಾಡುವುದಿಲ್ಲ. ನಾವು ಯಾರ ಬಗ್ಗೆಯೂ ತಮಾಷೆ ಮಾಡುವುದಿಲ್ಲ. ನಾವು ನಟಿಸುವಾಗ ಯಾವಾಗಲೂ ತುಂಬಾ ಜಾಗರೂಕತೆ ವಹಿಸುತ್ತೇವೆ. ಆದ್ದರಿಂದ ಜನತೆಗೆ ನೋವಾಗುವಂತಹ ವಿಷಯಗಳನ್ನು ಸಿನೆಮದಲ್ಲಿ ಸೇರಿಸುವುದಿಲ್ಲ. ಕೆಲವೊಮ್ಮೆ ಉದ್ದೇಶವಿಲ್ಲದೇ ಕೆಲವೊಂದು ವಿಷಯಗಳು ನಡೆಯುತ್ತವೆ ಮತ್ತು ಇಂದಿನ ದಿನದಲ್ಲಿ ಯಾರು ಕೂಡಾ ನ್ಯಾಯಾಲಯದ ಮಾತನ್ನೂ ಕೇಳುತ್ತಿಲ್ಲ. ಒಂದು ಸಿನೆಮ ಪ್ರದರ್ಶನವಾಗಲು ಬಿಡುವುದಿಲ್ಲ ಎಂದು ಜನತೆ ದೃಢ ನಿಶ್ಚಯ ಮಾಡಿಕೊಂಡರೆ, ನ್ಯಾಯಾಲಯದ ಆದೇಶವಿದ್ದರೂ ಸಿನೆಮ ಸುಸೂತ್ರವಾಗಿ ಪ್ರದರ್ಶನ ಕಾಣಲು ಕಷ್ಟವಾಗುತ್ತದೆ. ನೀವು ಈ ಬಗ್ಗೆ ಏನು ಮಾಡಲೂ ಸಾಧ್ಯವಿಲ್ಲ ಎಂದು ದೇವಗನ್ ಹೇಳಿದರು.

ಇಂದ್ರಕುಮಾರ್ ನಿರ್ದೇಶನದ ‘ಟೋಟಲ್ ಧಮಾಲ್’ ಸಿನೆಮದ ಪ್ರೊಮೋಷನ್ ಕಾರ್ಯಕ್ರಮದಲ್ಲಿ ದೇವಗನ್ ಮಾಧ್ಯಮದವರೊಂದಿಗೆ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News