ಫೆ.24ರಂದು "ಸಮಾಜ ಸೇವಾ ಸಹಕಾರಿ ಸಂಭ್ರಮ-2019" ಕಾರ್ಯಕ್ರಮ

Update: 2019-02-20 17:03 GMT

ಬಂಟ್ವಾಳ, ಫೆ. 20: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ ಸಂಸ್ಥಾಪಕರಾದ ಸಮಾಜ ರತ್ನ, ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಇವರ 97ನೆ ಜನ್ಮ ದಿನಾಚರಣೆಯ ಅಂಗವಾಗಿ ಫೆ.24ರಂದು "ಸಮಾಜ ಸೇವಾ ಸಹಕಾರಿ ಸಂಭ್ರಮ-2019"  ಕಾರ್ಯಕ್ರಮ ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸಹಕಾರಿ ಭವನ  ನಡೆಯಲಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.

ಬುಧವಾರ ಸಂಜೆ ಬಂಟ್ವಾಳದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ಶ್ರೀ ಧಾಮ ಮಾಣಿಲದ ಶ್ರೀ  ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಮುಳಿಯದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದು, ರೇಖಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವರು.

ರಾ.ಸ್ವ.ಸೇ.ಸಂಘದ ಜಿಲ್ಲಾ ಸಹ ಕಾರ್ಯ ವಾಹ ಸುಭಾಶ್ಚಂದ್ರ ಕಳಂಜ, ಯೋಗ ಶಿಕ್ಷಕ ಚೆನ್ನಕೇಶವ ಡಿ.ಆರ್., ಪುತ್ತೂರು ಪ್ರಶಾಂತಿ ಸದ್ಬಾವನ ಟ್ರಸ್ಟ್ ನ ಮಧುಸೂಧನ್ ನಾಯಕ್ ಅತಿಥಿಯಾಗಿ ಭಾಗವಹಿಸುವರು ಎಂದು ತಿಳಿಸಿದರು.         

ಈ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಯೋಗ ಮುದ್ರಾ ಶಿಬಿರ, ಸ್ವ-ಸಹಾಯ ಸಂಘಗಳ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಗಳು ನಡೆಯಲಿದೆ ಎಂದ ಅವರು, ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಮೊದಲಾದವರು ಭಾಗವಹಿಸುವರು ಎಂದು ಹೇಳಿದರು. 

ಬ್ಯಾಂಕ್ ಸುಮಾರು 143 ಸ್ವಸಹಾಯ ಸಂಘಗಳು ಹೊಂದಿದ್ದು, 1,314 ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ  ಇನ್ನೆರಡು ಶಾಖೆಗಳನ್ನು ತೆರೆಯಲು ನಿರ್ಧರಿಸಿದೆ. ತ್ವರಿತ ಸಾಲ ಸೌಲಭ್ಯ ಜಾರಿ, ಆನ್ ಲೈನ್ ಮೂಲಕ ಗ್ರಾಹಕರಿಗೆ ಸೇವೆ ನೀಡುವ ನಿಟ್ಟಿನಲ್ಲೂ ಯೋಜನೆ ಹಾಕಿಕೊಳ್ಳಲಾಗಿದೆ. ಸದಸ್ಯರ ಗಂಭೀರ ಕಾಯಿಲೆಗೆ ಆರ್ಥಿಕ ನೆರವು, ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆಯನ್ನು ಬ್ಯಾಂಕ್‍ನಲ್ಲಿ ಅಳವಡಿಸಲಾಗಿದೆ ಎಂದರು.

3.04 ಕೋ.ರೂ.ಲಾಭ:

ಬ್ಯಾಂಕ್ 146.27 ಕೋ.ರೂ.ದುಡಿಯುವ ಬಂಡವಾಳ ಹೊಂದಿದ್ದು, 2018 ಮಾರ್ಚ್ ಅಂತ್ಯಕ್ಕೆ 3.04 ಕೋ.ರೂ.ಲಾಭಗಳಿಸಿ 2017-18ರ ಸಾಲಿಗೆ 22ಶೇ.ಡಿವಿಡೆಂಡ್ ನೀಡಲಾಗಿದೆ ಎಂದು ಈ ಸಂದರ್ಭ ಹಾಜರಿದ್ದ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ಅವರು, ಒಟ್ಟು 469ಕೋ.ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸಾಲ ವಸೂಲಾತಿಯಲ್ಲು ಶೇ.95.36 ಸಾಧನೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ವಿಶ್ವನಾಥ ಕೆ.ಬಿ, ನಿರ್ದೇಶಕರಾದ ಜನಾರ್ದನ ಕುಲಾಲ್, ವಿಶ್ವನಾಥ್, ವಿನಾಯಕ, ಅರುಣ್ ಕುಮಾರ್, ಪದ್ಮನಾಭ ವಿಟ್ಲ, ವಿಜಯ್ ಕುಮಾರ್, ಎಂ.ವಾಮನ ಟೈಲರ್, ವಿಜಯಲಕ್ಷ್ಮಿ, ಜಯಂತಿ, ವಿದ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News