ಆಸ್ಪತ್ರೆಯಲ್ಲಿ ರಕ್ತಪೂರೈಕೆ: ಎಚ್‌ಐವಿಗೆ ತುತ್ತಾದ ಬಾಲಕಿ?

Update: 2019-02-20 17:03 GMT

ಕೊಯಿಮತ್ತೂರು,ಫೆ.20: ಕಳೆದ ವರ್ಷ ಹೃದ್ರೋಗ ಚಿಕಿತ್ಸೆಗಾಗಿ ಕೊಯಮತ್ತೂರು ಮೆಡಿಕಲ್ ಕಾಲೇಜು(ಸಿಎಂಸಿ) ಆಸ್ಪತ್ರೆಗೆ ದಾಖಲಾಗಿದ್ದ ಎರಡು ವರ್ಷ ಪ್ರಾಯದ ಬಾಲಕಿಗೆ ರಕ್ತ ನೀಡಿಕೆಯ ಬಳಿಕ ಆಕೆ ಎಚ್‌ಐವಿ ಸೋಂಕಿಗೆ ಗುರಿಯಾಗಿದ್ದಾಳೆ ಎಂದು ಹೆತ್ತವರ ಆರೋಪಿಸಿದ್ದಾರೆ. ಆದರೆ ಆಸ್ಪತ್ರೆಯು ಆರೋಪವನ್ನು ನಿರಾಕರಿಸಿದೆ.

ಹೃದ್ರೋಗ ಚಿಕಿತ್ಸೆಗಾಗಿ ತನ್ನ ಮಗಳನ್ನು 2018,ಜುಲೈನಲ್ಲಿ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಆಕೆಗೆ ರಕ್ತವನ್ನು ನೀಡಲಾಗಿತ್ತು ಮತ್ತು ವೈದ್ಯರು ಮಧ್ಯದಲ್ಲಿಯೇ ಅದನ್ನು ನಿಲ್ಲಿಸಿದ್ದರು. ರಕ್ತವನ್ನು ವಯಸ್ಸಾದ ವ್ಯಕ್ತಿಯಿಂದ ಪಡೆಯಲಾಗಿತ್ತು ಮತ್ತು ತಪ್ಪಿನಿಂದಾಗಿ ಬಾಲಕಿಗೆ ನೀಡಲಾಗಿತ್ತು ಎಂದು ಆಗ ವೈದ್ಯರು ಸಮಜಾಯಿಷಿ ನೀಡಿದ್ದರು. ಮರುದಿನವೇ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು ಮತ್ತು ಹೊರರೋಗಿಯಾಗಿ ಚಿಕಿತ್ಸೆ ಪಡೆಯುವಂತೆ ಮಾಡಲಾಗಿತ್ತು ಎಂದು ಬಾಲಕಿಯ ತಂದೆ ಸುದ್ದಿಗಾರರಿಗೆ ತಿಳಿಸಿದರು.

ಮಗಳ ಶರೀರದಲ್ಲಿ ಗಂಟುಗಳು ಉಂಟಾಗಿದ್ದನ್ನು ಗಮನಿಸಿ ತಪಾಸಣೆೆಗಾಗಿ ಫೆ.6ರಂದು ಸಿಎಮಸಿ ಆಸ್ಪತ್ರೆಗೆ ವಾಪಸ್ ಕರೆತರಲಾಗಿತ್ತು. ಆಕೆಗೆ ಎಚ್‌ಐವಿ ಸೋಂಕು ತಗುಲಿರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಬಾಲಕಿಯನ್ನು ಬೇರೆ ಯಾವ ಆಸ್ಪತ್ರೆಗೂ ತಾವು ಕರೆದೊಯ್ದಿರಲಿಲ್ಲ ಎಂದು ಅವರು ಹೇಳಿದರು.

ತಮ್ಮ ಇಡೀ ಕುಟುಂಬದಲ್ಲಿ ಮಗಳನ್ನು ಹೊರತುಪಡಿಸಿದರೆ ಯಾರಿಗೂ ಎಚ್‌ಐವಿ ಸೋಂಕು ಇಲ್ಲ. ರಕ್ತಪೂರೈಕೆಯ ಮೂಲಕವೇ ಅವಳಿಗೆ ಸೋಂಕು ತಗುಲಿರುವುದು ಸ್ಪಷ್ಟವಾಗಿದೆ ಎಂದರು.

ರಾಜ್ಯ ಆರೋಗ್ಯ ಇಲಾಖೆಯು ಈ ಬಗ್ಗೆ ವಿಚಾರಣೆಗೆ ಆದೇಶಿಸಿದ್ದು,ಆಸ್ಪತ್ರೆಯು ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

ಬಾಲಕಿಗೆ 50 ಎಂಎಲ್ ಪ್ಯಾಕ್ ಮಾಡಲಾಗಿದ್ದ ಕೆಂಪು ರಕ್ತಕಣ(ಆರ್‌ಬಿಸಿ)ಗಳನ್ನು ನೀಡಲಾಗಿತ್ತು. ಎಚ್‌ಐವಿ ಪ್ಲಾಸ್ಮಾದಿಂದ ಹರಡುತ್ತದೆಯೇ ಹೊರತು ಆರ್‌ಬಿಸಿಗಳಿಂದಲ್ಲ. ಬಾಲಕಿಗೆ ಬೇರೊಂದು ಆಸ್ಪತ್ರೆಯಲ್ಲಿ ಸೋಂಕು ತಗುಲಿರಬಹುದು ಎಂದು ಆಸ್ಪತ್ರೆಯ ಡೀನ್ ಅಶೋಕನ್ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News