ಮೋದಿ ಆಡಳಿತದಲ್ಲಿ ದೇಶ ಅಭದ್ರತೆಯ ಸ್ಥಿತಿಯಲ್ಲಿದೆ- ಸಚಿವ ಯು.ಟಿ.ಖಾದರ್

Update: 2019-02-20 17:36 GMT

ಪುತ್ತೂರು, ಫೆ. 20: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಸಂಪೂರ್ಣ ವಿಫಲತೆ ಕಂಡಿದ್ದು, ದೇಶ ಅಭದ್ರತೆಯ ಸ್ಥಿತಿಯಲ್ಲಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವಲ್ಲಿ ಪ್ರಧಾನಿ ಇಂದಿರಾಗಾಂಧಿ ತೋರಿದ್ದ ಧೈರ್ಯದ ಶೇ.10 ರಷ್ಟಾದರೂ ಧೈರ್ಯವನ್ನು ನರೇಂದ್ರ ಮೋದಿ ತೋರಿಸಬೇಕಿತ್ತು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ಪುತ್ತೂರಿನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ನೀತಿ ಆಯೋಗದ ಅಧ್ಯಕ್ಷರು ರಾಜೀನಾಮೆ ಕೊಟ್ಟು ಮನೆಗೆ ಹೋಗಿದ್ದಾರೆ. ರಿಸರ್ವ್ ಬ್ಯಾಂಕ್ ಗವರ್ನರ್ ರಾಜೀನಾಮೆ ನೀಡಿದ್ದಾರೆ. ಸುಪ್ರೀಂ ಕೋರ್ಟಿನ 4 ಮಂದಿ ನ್ಯಾಯಾಧೀಶರು ಸುದ್ದಿಗೋಷ್ಠಿಯಲ್ಲಿ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ. ದೇಶದಲ್ಲಿ ಅತ್ಯಂತ ಕಡಿಮೆ ಉದ್ಯೋಗ ಸೃಷ್ಠಿಯಾಗಿದೆ. ದೇಶಕ್ಕೆ ಬೆಂಬಲ ನೀಡದ ಪಕ್ಷದೊಂದಿಗೆ ಜೊತೆಯಾಗಿ ಕಾಶ್ಮೀರದಲ್ಲಿ ಆಡಳಿತ ನಡೆಸಿದ್ದಾರೆ. ಇದಕ್ಕೆ ಮೋದಿ ದೇಶದ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಕಾಶ್ಮೀರದಲ್ಲಿ ನಡೆದ ಘಟನೆ ಅತ್ಯಂತ ನೋವಿನ ವಿಚಾರ. ಇದು ದೇಶಕ್ಕೆ ಒಡ್ಡಿದ ಬಹುದೊಡ್ಡ ಸವಾಲು ಎಂದ ಅವರು ಮುನ್ನೂರು ಕೆಜಿ ಸ್ಪೋಟಕಗಳನ್ನು ಪುಲ್ವಾಮಕ್ಕೆ ತರಲು 3 ದಿನಗಳಷ್ಟು ಕಾಲಾವಕಾಶ ಬೇಕಾಗಬಹುದು. ಆದರೂ ಕೇಂದ್ರ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಸಚಿವರು ಚುನಾವಣೆ ಎದುರಿಸುವ ಸಂದರ್ಭದಲ್ಲಿ ಪಾತಕಿ ದಾವೂದ್‍ನನ್ನು ಹಿಡಿದು ದೇಶಕ್ಕೆ ತರುತ್ತೇವೆ ಎಂದವರು ಆಡಳಿತಕ್ಕೆ ಬಂದ ನಂತರ ಚಕಾರ ಎತ್ತಿದ್ದಾರೆಯೇ, ನೆರೆಕರೆ ದೇಶಗಳಾದ ಚೀನಾ,ನೇಪಾಳ,ಬಾಂಗ್ಲಾ ದೇಶದೊಂದಿಗೆ ಸಂಬಂಧ ಸರಿಯಿಲ್ಲದೆ ಪಾಕಿಸ್ತಾನವನ್ನು ಮಟ್ಟ ಹಾಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

 ದೇಶದ ಪರ ನಿಲ್ಲಬೇಕು. ಪ್ರತೀಕಾರ ತೀರಿಸಬೇಕು ಎಂಬುವುದು ನಮ್ಮ ಬೇಡಿಕೆ. ಈ ವಿಚಾರದಲ್ಲಿ ನಾವೆಲ್ಲ ಮೋದಿ ಜತೆ ಇದ್ದೇವೆ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವೂ ಮಾಡುವುದೂ ಇಲ್ಲ ಎಂದು ಹೇಳಿದರು. 

ಸಮ್ಮಿಶ್ರ ಸರ್ಕಾರ ಅತಂತ್ರಗೊಳಿಸುವ ಸಂಚು

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಬಿಜೆಪಿ ಬಹಳಷ್ಟು ಸಂಚು ನಡೆದಿದ್ದು, ಇದರ ಹಿಂದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇದ್ದಾರೆ. ಬಿಜೆಪಿಗರಿಗೆ ರಾಜ್ಯದ ಹಿತಾಸಕ್ತಿಯಿಂದ ಪಕ್ಷದ ಹಿತಾಸಕ್ತಿಯೇ ಹೆಚ್ಚು ಎಂಬುವುದನ್ನು ಮೊನ್ನೆಯ ಅಧಿವೇಶನದ ವೇಳೆ ಬಿಜೆಪಿಗರು ತೋರಿಸಿಕೊಟ್ಟಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಮುಂಗಡ ಪತ್ರದಲ್ಲಿ ಸಾಕಷ್ಟು ಅನುದಾನಗಳನ್ನು ಕರಾವಳಿ ಭಾಗಕ್ಕೂ ನೀಡಲಾಗಿದೆ. ಆದರೆ ಬಜೆಟ್ ಚರ್ಚೆಯಲ್ಲಿ ಭಾಗವಹಿಸದ ಬಿಜೆಪಿ ಶಾಸಕರು ಆರೋಪ ಮಾಡಲು ಕಾರ್ಯದಲ್ಲಿ ನಿರತರಾಗಿದ್ದು, ಇವರಿಗೆ ಈ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕೇ ಇಲ್ಲ ಎಂದರು. 

ಮಾ. 1 ಮೂಡಬಿದ್ರೆ, ಕಡಬ ತಾಲೂಕು ಉದ್ಘಾಟನೆ

ಮುಡಬಿದ್ರೆ ಮತ್ತು ಕಡಬಕ್ಕೆ ಮಾರ್ಚ್ 1ರಂದು ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಈ ಎರಡೂ ತಾಲೂಕುಗಳನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರು ದೇಶಪಾಂಡೆ ಅವರು ತಲಾ ರೂ.10ಕೋಟಿ ವೆಚ್ಚದ ತಾಲೂಕು ಕಚೇರಿಗಳ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಚಿವ ಖಾದರ್ ತಿಳಿಸಿದರು.

ಜಿಲ್ಲೆಯ ಕೆಲವು ಪ್ರದೇಶಗಳಿಗೆ ಇನ್ನೂ ಕೂಡ ಸರಿಯಾಗಿ ಕುಡಿಯುವ ನೀರು ದೊರಕುತ್ತಿಲ್ಲ. ಮಂಗಳೂರಿನಿಂದ ಎಲ್ಲ ಪ್ರದೇಶಗಳಿಗೆ ನೀರು ಪೂರೈಕೆ ಅಸಾಧ್ಯದ ಮಾತು. ಹಾಗೆಂದು ಪ್ರತಿ ಕಡೆಯೂ ಅಣೆಕಟ್ಟು ನಿರ್ಮಾಣ ಕಷ್ಟದ ಮಾತು. ಇದಕ್ಕಾಗಿ ಸೇತುವೆಗೆ ಡ್ಯಾಂ ಕಟ್ಟಿದರೆ, ಎರಡೂ ಕೆಲಸಗಳನ್ನು ಸುಲಭವಾಗಿ ಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಹರೇಕಳ - ಅಡ್ಯಾರ್ ನಡುವೆ 200 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಿಂಡಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಮಂಜೂರಾತಿ ದೊರಕಿದ್ದು, ಆಡಳಿತ ವ್ಯವಸ್ಥೆಗೆ ಬಂದಿದೆ. ಸದ್ಯದಲ್ಲೇ ಯೋಜನೆ ಜಾರಿಗೆ ಬರಲಿದೆ. ಇದು ರಾಜ್ಯದ ಮಟ್ಟಿಗೆ ಹೊಸದು. ಇದರಿಂದ ಅಂತರ್ಜಲವೂ ವೃದ್ಧಿ ಆಗಲಿದೆ ಎಂದರು.

ತಾಲೂಕಿನಲ್ಲಿ ಸಿಡಿಲು ನಿರೋಧಕ ಅಳವಡಿಸುವ ಕುರಿತು ಕ್ರಮಕೈಗೊಳ್ಳಲಾಗುವುದು. ಪುತ್ತೂರು ನಗರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ರೂ.65 ಲಕ್ಷ ಅನುದಾನ ಇಡಲಾಗಿದೆ. ಒಳಚರಂಡಿ ಯೋಜನೆಗಾಗಿ    ರೂ.125 ಕೋಟಿಯ ಯುಜಿಡಿ ಯೋಜನೆ ಪ್ರಾರಂಭಿಕ ಹಂತದಲ್ಲಿದೆ. ಯೋಜನೆಗಾಗಿ ಬೇರೆ ಬೇರೆ ಕಡೆಗಳಲ್ಲಿ 30 ಎಕರೆ ಜಾಗದ ಭೂಸ್ವಾದೀನತೆ ನಡೆಯಬೇಕಾಗಿದೆ ಎಂದು ತಿಳಿಸಿದರು. 

ಸುದ್ದಿ ಗೋಷ್ಟಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಮುಖಂಡ ನಝೀರ್ ಮಠ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News