ಸರ್ಕಾರದ ಯೋಜನೆಗಳ ಸಮರ್ಪಕ ವಿತರಣೆಗೆ ಅಧಿಕಾರಿಗಳು ಶ್ರಮಿಸಬೇಕು- ಯು.ಟಿ.ಖಾದರ್

Update: 2019-02-20 17:38 GMT

ಪುತ್ತೂರು, ಫೆ. 20: ಸರ್ಕಾರ ಜನರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದೆ. ಆದರೆ ಈ ಯೋಜನೆಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವುದು ಬಹಳ ಪ್ರಾಮುಖ್ಯ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಬುಧವಾರ ಪುತ್ತೂರಿನ ಬಿಲ್ಲವ ಸಮುದಾಯ ಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವರು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು.

ಜನಸಾಮಾನ್ಯರ ನೋವುಗಳನ್ನು ಅರ್ಥಮಾಡಿಕೊಂಡ ಸರ್ಕಾರವು ಅವರಿಗಾಗಿ ಯೋಜನೆಗಳನ್ನು ಪೂರೈಸುವ ಕೆಲಸ ಮಾಡುತ್ತದೆ. ಯೋಜನೆಗಳು ಅರ್ಹರಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದ ಅವರು ವೃದ್ಧಾಪ್ಯ, ವಿಕಲಚೇತನ ಇನ್ನಿತರ ವೇತನಗಳ ಫಲಾನುಭಗಳ ಸಮಗ್ರ ಮಾಹಿತಿಯ ಪಟ್ಟಿ ಪ್ರತೀ ಗ್ರಾಮ ಪಂಚಾಯತ್ ಮತ್ತು ಅಂಗನವಾಡಿಗಳಲ್ಲಿ ಇರಬೇಕು. ತಮ್ಮ ವೇತನದ ಸಮಸ್ಯೆಯನ್ನು ಹೇಳಿಕೊಂಡು ಫಲಾನುಭವಿಗಳು ಶಾಸಕರ, ಸಚಿವರ ಬಳಿಗೆ ಬರುವಂತೆ ಮಾಡಬಾರದು. ನಾವೇ ಅವರ ಬಳಿಗೆ ಹೋಗಿ ನೀಡುವಂತಾಗಬೇಕು. ಅರ್ಹರಿಗೆ ಪೆನ್ಶನ್ ವ್ಯವಸ್ಥೆಗಳನ್ನು ತಲುಪಿಸುವ ಕೆಲಸವನ್ನು ಗ್ರಾಮ ಮಟ್ಟದ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತರು ಮಾಡಬೇಕು ಎಂದರು. 

ಶಾಸಕ ಸಂಜೀವ ಮಠಂದೂರು ಮಾತನಾಡಿ ಸರ್ಕಾರದ ಯೋಜನೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದೆ. ಮರಳು ಸಮಸ್ಯೆ ಪರಿಹಾರಬೇಕು.  94ಸಿ ಮತ್ತು ಸಿಸಿ ಅರ್ಜಿದಾರರಿಗೆ ಹಕ್ಕು ಪತ್ರ ಇನ್ನೂ ಸಿಕ್ಕಿಲ್ಲ. ಅಕ್ರಮ ಸಕ್ರಮ ಸಮಿತಿ ಆಗದಿರುವ ಕಾರಣ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಬಡವರು ಕಾಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಅಡಿಕೆ ಕೊಳೆರೋಗ ಪೀಡಿತರು ಸರ್ಕಾರದ ಕಡೆ ಮುಖ ಮಾಡಿದ್ದಾರೆ. ಕುಡಿಯುವ ನೀರಿನ `ಜಲಧಾರೆ' ಯೋಜನೆಯಲ್ಲಿ ಪುತ್ತೂರು ಸುಳ್ಯದ ಬಗ್ಗೆ ಮಲತಾಯಿ ಧೋರಣೆ ತಾಳಲಾಗಿದೆ. ತಾಲೂಕಿನಲ್ಲಿ 1600 ಕಿ.ಮೀ ರಸ್ತೆಗಳಿದ್ದು, ಇಲ್ಲಿನ ಗುಂಡಿ ಮುಚ್ಚಲು ಸರ್ಕಾರದ ಅನುದಾನ ಬಂದಿಲ್ಲ. ಪ್ರಾಕೃತಿಕ ವಿಕೋಪ ಹಾನಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಮೂಲಭೂತ ಸೌಲಭ್ಯಗಳ ಪೂರೈಕೆಯಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸಚಿವರು ಪರಿಹರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಎಚ್.ಕೆ. ಕೃಷ್ಣಮೂರ್ತಿ, ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News