ಕ್ವಿಟೋವಾ, ಹಾಲೆಪ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ

Update: 2019-02-20 18:43 GMT

ದುಬೈ, ಫೆ.20: ಮಾಜಿ ಚಾಂಪಿಯನ್‌ಗಳಾದ ಪೆಟ್ರಾ ಕ್ವಿಟೋವಾ ಹಾಗೂ ಸಿಮೊನಾ ಹಾಲೆಪ್ ಮರುಭೂಮಿಯ ಬಿರುಗಾಳಿಯ ನಡುವೆಯೂ ಉತ್ತಮ ಪ್ರದರ್ಶನ ನೀಡಿ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಸ್ಪರ್ಧೆಯಲ್ಲಿರುವ ಗರಿಷ್ಠ ರ್ಯಾಂಕಿನ ಆಟಗಾರ್ತಿ, ದ್ವಿತೀಯ ಶ್ರೇಯಾಂಕದ ಕ್ವಿಟೋವಾ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಕ್ವಾಲಿಫೈಯರ್ ಜೆನ್ನಿಫರ್ ಬ್ರಾಡಿ ಅವರನ್ನು 7-5, 1-6, 6-3 ಸೆಟ್‌ಗಳಿಂದ ಮಣಿಸಿದರು.

ಪ್ರೇಕ್ಷಕರ ಫೇವರಿಟ್ ಆಟಗಾರ್ತಿ ಹಾಗೂ ಮೂರನೇ ಶ್ರೇಯಾಂಕದ ಹಾಲೆಪ್ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಉಕ್ರೇನ್‌ನ ಲೆಸಿಯಾ ಸುರೆಂಕೊರನ್ನು 6-3, 7-5 ಸೆಟ್‌ಗಳಿಂದ ಮಣಿಸಿದರು. ವಿಶ್ವದ ಮಾಜಿ ನಂ.1 ಆಟಗಾರ್ತಿ ರೊಮೇನಿಯದ ಹಾಲೆಪ್ ಸರಣಿಯಲ್ಲಿ ಏಳನೇ ಪಂದ್ಯ ಜಯಿಸಿ ಪ್ರಾಬಲ್ಯ ಮೆರೆದಿದ್ದಾರೆ.

ಸ್ಲೋವಾಕಿಯದ ವಿಕ್ಟೋರಿಯ ಕುರ್ಮೊವಾ ಅಮೆರಿಕದ ಸೋಫಿಯಾ ಕೆನಿನ್‌ರನ್ನು 1-6, 7-5, 6-2 ಅಂತರದಿಂದ ಮಣಿಸಿದರು. ಈ ಮೂಲಕ ಈ ಋತುವಿನಲ್ಲಿ ಎರಡನೇ ಬಾರಿ ಅಂತಿಮ-8ರ ಘಟ್ಟ ತಲುಪಿದ್ದಾರೆ.

2013ರಲ್ಲಿ ದುಬೈನಲ್ಲಿ ಟ್ರೋಫಿ ಜಯಿಸಿದ್ದ ಕ್ವಿಟೋವಾ, ‘‘ನಾನು ಇಲ್ಲಿಗೆ ಬಂದಾಗ ಹೆಚ್ಚು ದಿನ ಪ್ರಾಕ್ಟೀಸ್ ನಡೆಸಿರಲಿಲ್ಲ. ಟೂರ್ನಿಗೆ ಯಾವುದೆ ತಯಾರಿ ನಡೆಸಿರಲಿಲ್ಲ’’ ಎಂದು ಹೇಳಿದ್ದಾರೆ.

ಮೊದಲ ಸುತ್ತಿನಲ್ಲೇ ಹೊರಬಿದ್ದ ಒಸಾಕಾ

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಫ್ರಾನ್ಸ್‌ನ ಕ್ರಿಸ್ಟಿನಾ ಲಾಡೆನೊವಿಕ್ ವಿರುದ್ಧ 3-6, 3-6 ನೇರ ಸೆಟ್‌ಗಳಿಂದ ಆಘಾತ ಅನುಭವಿಸಿದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕಾ, ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಿಂದ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಒಸಾಕಾ ಅಗ್ರಸ್ಥಾನದಲ್ಲಿರುವ ಒತ್ತಡವನ್ನು ನಿಭಾಯಿಸಲು ಪರದಾಡುತ್ತಿರುವುದಾಗಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು. ಸುಮಾರು 1 ತಾಸಿನ ಅವಧಿಯಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಅವರು 25 ಅನಗತ್ಯ ತಪ್ಪುಗಳನ್ನು ಎಸಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News