ಖಾಝಿ ಸಿಎಂ ಉಸ್ತಾದ್ ನಿಗೂಢ ಮರಣ ಪ್ರಕರಣ: ಮರುತನಿಖೆಗೆ ಆಗ್ರಹಿಸಿ ಫೆ.23, 24ರಂದು ಪ್ರತಿಭಟನಾ ಜಾಥಾ

Update: 2019-02-21 08:55 GMT

ಮಂಗಳೂರು, ಫೆ.21: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚೆಂಬರಿಕ, ಕಾಸರಗೋಡು ಖಾಝಿಯಾಗಿದ್ದ ಹಾಗೂ ಖಗೋಳ ಶಾಸ್ತ್ರಜ್ಞ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಹಿರಿಯ ಉಪಾಧ್ಯಕ್ಷರು, ಸಾಹಿತಿಯೂ ಆಗಿದ್ದ ಸಿ.ಎಂ.ಅಬ್ದುಲ್ಲಾ ಉಸ್ತಾದ್ ಅಸಹಜವಾಗಿ ಮರಣ ಹೊಂದಿ 10 ವರ್ಷಗಳಾದರೂ ಈ ಬಗ್ಗೆ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಸೂಕ್ತ ಮರು ತನಿಖೆಗೆ ಆಗ್ರಹಿಸಿ ಫೆ.28ರಂದು ಕೇರಳದ ಕೋಝಿಕ್ಕೋಡ್ ಮುದಲಕ್ಕುಳಂ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಜಾಗೃತಿಯ ಅಂಗವಾಗಿ ದ.ಕ. ಜಿಲ್ಲೆಯ ಅರ್ಶದೀಸ್‌ಅಸೊಸಿಯೇಶನ್ ವತಿಯಿಂದ ಫೆ.23 ಮತ್ತು 24ರಂದು ಪ್ರತಿಭಟನಾ ಜಾಥಾ ಹಮ್ಮಿಕೊಂಡಿದೆ ಎಂದು ದ.ಕ ಅರ್ಶದಿ ಉಲಮಾ ಒಕ್ಕೂಟದ ಅಧ್ಯಕ್ಷ ಖಲೀಲುರ್ರಹ್ಮನ್ ತಿಳಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಕ್ಕಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಚೆಂಬರಿಕ ಉಸ್ತಾದರ ಶಿಷ್ಯಂದಿರು ಹಾಗೂ ಕ್ರಿಯಾ ಸಮಿತಿ ಸದಸ್ಯರು ಹಾಗೂ ಉಸ್ತಾದರ ಕುಟುಂಬದ ಸದಸ್ಯರು ರಾತ್ರಿ ಹಗಲೆನ್ನದೆ ಪ್ರತಿಭಟನೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಸುಮಾರು 150 ದಿನಗಳಿಂದ ಕಾಸರಗೋಡು ಬಸ್ ನಿಲ್ದಾಣದ ಬಳಿ ಸಹಿ ಸಂಗ್ರಹದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ. ತನಿಖಾ ತಂಡಕ್ಕೆ ನೆರವಾಗುವ ರೀತಿಯಲ್ಲಿ ಸಂಬಂಧಪಟ್ಟವರು ಸಾವಿನ ಬಗ್ಗೆ ಮಾಹಿತಿ ನೀಡಿದರೂ ಪ್ರತಿಭಟನೆ ನಡೆಸುತ್ತಿರುವವರನ್ನು ಬೆದರಿಸಲಾಗುತ್ತಿದೆ. ಈ ಅಸಹಜ ಸಾವಿನ ಹಿಂದಿರುವ ಶಕ್ತಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅರ್ಶದೀಸ್ ಅಸೊಸಿಯೇಶನ್ ನ ದ.ಕ. ಜಿಲ್ಲಾ ಉಲಮಾ ಒಕ್ಕೂಟದ ಸದಸ್ಯರಾದ ತಸ್ಲಿಂ ಅರ್ಶದಿ ಅಮ್ಮೆಮಾರ್, ಶರೀಫ್ ಅರ್ಶದಿ ಅಡ್ಡೂರು, ಸಲೀಂ ಅರ್ಶದಿ ದೆಮ್ಮಲೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News