ಸೊರಕೆಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ ಪರ್ಯಾಯ ಅಭ್ಯರ್ಥಿ: ಮುಸ್ಲಿಮ್ ಸಂಘಟನೆಗಳ ಎಚ್ಚರಿಕೆ

Update: 2019-02-21 12:58 GMT

ಮಂಗಳೂರು, ಫೆ.21: ಮುಂದಿನ ಲೋಕಸಭಾ ಚುನಾವಣೆಗೆ ದ.ಕ. ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ವಿನಯ ಕುಮಾರ್ ಸೊರಕೆ ಆಕಾಂಕ್ಷಿಯಾಗಿದ್ದು, ಅವರಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಬಾರದು ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಯ ಕುಮಾರ್ ಸೊರಕೆ ಬದಲು ಯಾವುದೇ ವ್ಯಕ್ತಿಯನ್ನು ನಿಲ್ಲಿಸಿದ್ದಲ್ಲಿ ತಮ್ಮಿಂದ ವಿರೋಧವಿಲ್ಲ. ಒಂದು ವೇಳೆ ಸೊರಕೆಗೆ ಟಿಕೆಟ್ ನೀಡಿದ್ದೇ ಆದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು. ಜೊತೆಗೆ ಸೊರಕೆ ವಿರುದ್ಧ ಪರ್ಯಾಯ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

2013ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ ಕುಮಾರ್ ಸೊರಕೆ ಗೆಲುವಿನಲ್ಲಿ ಮುಸ್ಲಿಂ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಕಳೆದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭ ವಿನಯ ಕುಮಾರ್ ಸೊರಕೆ ‘ಒಬ್ಬನೇ ಒಬ್ಬ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸದೇ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ದ್ರೋಹ ಬಗೆದ ಬಗ್ಗೆ ಸೊರಕೆಯನ್ನು ಪ್ರಶ್ನಿಸಿದಾಗ, ‘ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದಿಲ್ಲ, ಹಿಂದೂಗಳು ಮುಸ್ಲಿಮರಿಗೆ ಮತ ಹಾಕುವುದಿಲ್ಲ’ ಎಂಬ ಬಾಲಿಷ ಹೇಳಿಕೆ ನೀಡಿ ಕಾಂಗ್ರೆಸ್‌ನ ಜಾತ್ಯತೀತ ತತ್ವ ಸಿದ್ಧಾಂತವನ್ನೇ ಅವಮಾನ ಮಾಡಲಾಗಿದೆ. ನಿಜವಾದ ಕಾಂಗ್ರೆಸ್ಸಿಗರು ಮತ್ತು ಇಲ್ಲಿನ ಜನರು ಜಾತಿ, ಧರ್ಮ ನೋಡಿ ಮತ ಹಾಕುವುದಿಲ್ಲ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಶಕ್ತಿನಗರ ವಾರ್ಡ್‌ನಲ್ಲಿ ಮಸ್ಲಿಮೇತರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮಾಜಿ ಮೇಯರ್ ಅಬ್ದುಲ್ ಅಝೀಝ್ ಅವರನ್ನು ಮೂರು ಬಾರಿ ಬಹುಮತದಿಂದ ಆರಿಸಿದ್ದಾರೆ. ಇಲ್ಲಿನ ಸಹೋದರತಾ ಬಾಂಧವ್ಯಕ್ಕೆ ಅಡ್ಡಿ ಮಾಡುವಂತಹ ಮಾತುಗಳು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯ ಬಾಯಿಯಿಂದ ಬರುವುದು ತರವಲ್ಲ. ಯಾವುದೇ ಕಾರಣಕ್ಕೂ ದ.ಕ.  ಲೋಕಸಭಾ ಕ್ಷೇತ್ರದಿಂದ ವಿನಯ ಕುಮಾರ್ ಸೊರಕೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿ.ಎಂ.ಮುಸ್ತಫಾ, ಮುಹಮ್ಮದ್ ಹನೀಫ್ ಯು., ಹಿದಾಯತ್ ಮಾರಿಪಳ್ಳ, ಸಿದ್ದೀಕ್ ತಲಪಾಡಿ, ಮೊಯ್ದಿನ್ ಮೋನು, ಅಬ್ದುಲ್ ಜಲೀಲ್ ಅದ್ದಾಕ, ಮುಹಮ್ಮದ್ ಅಶ್ರಫ್ ಬದ್ರಿಯಾ, ಕೆ.ಎಚ್. ಅಬೂಬಕರ್, ಶಬ್ಬೀರ್ ತಲಪಾಡಿ, ಹಾರಿಸ್ ಬೈಕಂಪಾಡಿ, ವಿ.ಎಚ್.ಕರೀಂ, ಫಯಾಝ್ ಬಂದರ್, ಕೆ.ಎಸ್. ಅಬೂಬಕರ್ ಪಲ್ಲಮಜಲು, ಇಬ್ರಾಹೀಂ ಕೈಲಾರ್, ಪಿ.ವಿ. ರಹೀಂ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News