ಮಂಗಳೂರು: ಫೆ. 23ರಿಂದ ಕೃಷಿ ಯಂತ್ರ ಮೇಳಕ್ಕೆ ಭರದ ಸಿದ್ಧತೆ

Update: 2019-02-21 12:48 GMT

ಮಂಗಳೂರು, ಫೆ.21: ಕ್ಯಾಂಪ್ಕೋ ಸಂಸ್ಥೆ, ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮತ್ತು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಫೆ. 23ರಿಂದ 25ರವರೆಗೆ ನಡೆಯಲಿರುವ ಕೃಷಿ ಯಂತ್ರ ಮೇಳಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಸುದ್ದಿಗೋಷ್ಠಿಯಲ್ಲಿಂದು ಮೇಳದ ಸಿದ್ಧತೆ ಮಾಹಿತಿ ನೀಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಸತೀಶ್ ರಾವ್ ಪಿ., ಮೇಳದಲ್ಲಿ ಭಾಗವಹಿಸಲು ಈಗಾಗಲೇ 266 ಮಳಿಗೆಗಳು ನೋಂದಣಿಯಾಗಿವೆ ಎಂದರು.

ಮೇಳದಲ್ಲಿ ಕೃಷಿ ಯಂತ್ರಗಳಿಗೆ ಸಂಬಂಧಿಸಿ 154 ಮಳಿಗೆಗಳು, ಕನಸಿನ ಮನೆಗೆ ಸಂಬಂಧಿಸಿ 83 ಮಳಿಗೆಗಳಿರುತ್ತವೆ. ಇದಲ್ಲದೆ 8 ಅಟೋಮೊಬೈಲ್, 4 ನರ್ಸರಿ, 4 ಕೃಷಿ ನಿಯತಕಾಲಿಗಳು ಹಾಗೂ ಬೀಜ ಮಾರಾಟ ಮಳಿಗೆಗಳು 20 ಆಹಾರ ಮಳಿಗೆಗಳು ಮತ್ತು 20 ಇತರ ವ್ಯಾಪಾರ ಮಳಿಗೆಗಳು ಇರಲಿವೆ. ಬ್ಯಾಂಕ್ ಸಾಲ ಸೌಲಭ್ಯಗಳ ಮಾಹಿತಿಗೆ ಬ್ಯಾಂಕಿಂಗ್ ಮಳಿಗೆಯನ್ನೂ ತೆರೆಯಲಾಗಿದೆ ಎಂದು ಅವರು ಹೇಳಿದರು.

ಡ್ರೋನ್ ಮೂಲಕ ಔಷಧ ಸಿಂಪಡಣೆ ಪ್ರಾತ್ಯಕ್ಷಿಕೆ

ಮೇಳದ ವಿಶೇಷ ಆಕರ್ಷಣೆಯಾಗಿ ಡ್ರೋನ್ ಮೂಲಕ ಔಷಧ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಸುಸಜ್ಜಿತ ಕಾರ್ಬನ್ ಫೈಬರ್ ದೋಟಿಗಳ ಪ್ರದರ್ಶನ, ಜಲ ಕೃಷಿ ವಿಧಾನದ ಸಮಗ್ರ ಪರಿಚಯ, ನೂತನವಾಗಿ ಅವಿಷ್ಕಾರಗೊಂಡ ಹೈನುಗಾರಿಕಾ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಶನ , ವಿವಿಧ ಮೇವಿನ ತಳಿಗಳ ಪ್ರದರ್ಶನ, ಸ್ಥಳದಲ್ಲೇ ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಮಾರಾಟ ವಿಶೇಷ ಆಕರ್ಷಣೆಯಾಗಲಿದೆ ಎಂದರು.

ಮೇಳದಲ್ಲಿ ಒಟ್ಟು 6 ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಆಯಾಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಂದ ಅನುಭವ ಹಂಚಿಕೊಳ್ಳುವ ವ್ಯವ್ಥೆಯನ್ನೂ ಮೇಳದಲ್ಲಿ ಮಾಡಲಾಗಿದೆ.

23ರಂದು ಬೆಳಗೆ 10-30ಕ್ಕೆ ಕೇಂದ್ರ ಸಚಿವ ಪಿ.ಪಿ. ಚೌಧರಿ ಉದ್ಘಾಟನೆ ನೆರವೇರಿಸುವರು. ಫೆ. 25ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕ್ಯಾಂಪ್ಕೋ ವ್ವವಸ್ಥಾಪಕ ನಿರ್ದೇಶಕ ಎಂ. ಸುರೇಶ್ ಭಂಡಾರಿ, ಗೋವಿಂದೇ ಗೌಡ, ಕಿಶೋರ್ ಕುಮಾರ್, ಆಶ್ಲೆ ಡಿಸೋಜಾ ಉಪಸ್ಥಿತರಿದ್ದರು.
ಬಾಕ್ಸ್ ಮಾಡಬಹುದು.

ಚಾಕಲೇಟ್ ಫ್ಯಾಕ್ಟರಿ ವೀಕ್ಷಿಸಲು ಅವಕಾಶ

ಈ ಮೂರು ದಿನಗಳಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಯಂತ್ರಮೇಳದ ಮೈದಾನದಿಂದ ಚಾಕಲೇಟ್ ಫ್ಯಾಕ್ಟರಿಗೆ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿದೆ.
 ಎಸ್.ಆರ್. ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೋ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News