ನರೇಂದ್ರ ಮೋದಿ ಸರಕಾರ ಎಲ್ಲ ವಿಭಾಗದಲ್ಲಿಯೂ ಸಂಪೂರ್ಣ ವಿಫಲ: ಸಚಿವ ಯು.ಟಿ. ಖಾದರ್

Update: 2019-02-21 13:15 GMT

ಬೆಳ್ತಂಗಡಿ, ಫೆ. 21: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಎಲ್ಲ ವಿಭಾಗದಲ್ಲಿಯೂ ಸಂಪೂರ್ಣ ವಿಫಲತೆಯನ್ನು ಕಂಡಿದೆ. ಅವರು ಅಧಿಕಾರಕ್ಕೆ ಬರುವ ಮೊದಲು ಹೇಳಿದ್ದರ ತದ್ವಿರುದ್ಧವಾಗಿ ಅಧಿಕಾರಕ್ಕೆ ಬಂದ ಬಳಿಕ ನಡೆದುಕೊಂಡಿದ್ದಾರೆ.  ಜನರು ಈ ಜನ ವಿರೋಧಿ ಸರಕಾರದ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.

ಅವರು ಗುರುವಾರ ಬೆಳ್ತಂಗಡಿಯ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಕತ್ವದಲ್ಲಿ ಉಗ್ರಗಾಮಿಗಳು ಭಾರತೀಯ ಯೋಧರ ವಿರುದ್ಧ ನಡೆಸಿದ ದಾಳಿ ಇಡೀ ದೇಶದ ಮೇಲಿನ ದಾಳಿಯಾಗಿದೆ. ನಾವು ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕಾಗಿದೆ ಅದಕ್ಕೆ ಎಲ್ಲ ರೀತಿಯ ಬೆಂಬಲವಿದೆ ಎಂದ ಅವರು ಯಾಕೆ ಈ ರೀತಿಯ ಘಟನೆಗಳು ನಡೆಯುತ್ತಿದೆ ಎಂದು ನಾವು ಚಿಂತನೆ ನಡೆಸಬೇಕಾಗಿದೆ, ಪ್ರಧಾನಿಯೇ ಪಾಕಿಸ್ತಾನಕ್ಕೆ ಹೋಗಿ ಟೀ ಕುಡಿದು ಬಂದರೂ ಸಮಸ್ಯೆಗೆಳಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಇಷ್ಟೊಂದು ದೊಡ್ಡ ದಾಳಿ ನಡೆಯಬೇಕಾದರೆ ಎಲ್ಲಿ ಬೇಹುಗಾರಿಕೆ ವೈಫಲ್ಯವಾಗಿದೆ ಎಂದು ನೋಡಿ ಅದನ್ನು ಸರಿಪಡಿಸಬೇಕಾಗಿದೆ. ಕಾಶ್ಮೀರದಲ್ಲಿ ಇತ್ತೀಚೆಗಿನ ವರೆಗೂ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿರುವ ಪಿ.ಡಿ.ಪಿ ಯೊಂದಿಗೆ ಸೇರಿ ಬಿಜೆಪಿ ಆಡಳಿತ ನಡೆಸಿತ್ತು ಎಂದು ನೆನಪಿಸಿದ ಅವರು ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮಾತ್ರ ಅದರ ಒಂದಂಶವನ್ನಾದರೂ ಅಳವಡಿಸಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.

ಆಯುಷ್ ಯೋಜನೆಯ ಅನಿಷ್ಠಾನದಲ್ಲಿ ಹಾಗೂ ಅಡುಗೆ ಅನಿಲ ವಿತರಣೆಯಲ್ಲಿ ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಚಿವರು ರಾಜ್ಯ ಸರಕಾರದ ಸಹಕಾರದೊಂದಿಗೆ ಅನುಷ್ಟಾನಕ್ಕೆ ಬರಬೇಕಾದ ಆಯುಷ್ಮಾನ್ ಯೋಜನೆಯ ಬಗ್ಗೆ ಕೇಂದ್ರ ಸರಕಾರವೇ ಫಲಾನುಭಾವಿಗಳಿಗೆ ನೇರ ವಾಗಿ ಪತ್ರ ಬರೆಯುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಸರಕಾರ ಶೇ. 40 ಹಾಗೂ ರಾಜ್ಯ ಸರಕಾರ ಶೇ 60 ವೆಚ್ಚವನ್ನು ಭರಿಸುತ್ತಿದೆ ಇದನ್ನು ಅನುಷ್ಟಾನಕ್ಕೆ ತರುವ ಜವಾಬ್ದಾರಿಯೂ ರಾಜ್ಯ ಸರಕಾರದ್ದಾಗಿದೆ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ ಎಂದು ವಿವರಿಸಿದರು.

ಉಜ್ವಲ ಯೋಜನೆಯಲ್ಲಿ ಗ್ಯಾಸ್ ವಿತರಣೆಯನ್ನು ಕಂಡಕಂಡಲ್ಲಿ ಮಾಡುವ ಮೂಲಕವಾಗಿ ಅದನ್ನು ಪಕ್ಷದ ಕಾರ್ಯಕ್ರಮವಾಗಿಸುವ ಪ್ರಯತ್ನ ನಡೆಯುತ್ತಿದೆ, ಇದು ಒಂದು ಕೆಟ್ಟ ಸಂಪ್ರದಾಯಕ್ಕೆ ಕಾರಣವಾಗುತ್ತದೆ ಎಂದರು. ಗ್ಯಾಸ್ ವಿತರಿಸುವ ಬಗ್ಗೆ ಇರುವ ಉತ್ಸಾಹ ಒಳ್ಳೇಯದೇ ಆದರೆ ಅದರೊಂದಿಗೆ ಒಂದು ಸಾವಿರಕ್ಕೆ ಏರಿರುವ ಗ್ಯಾಸ್ ಬೆಲೆಯನ್ನು ಕಡಿಮೆಗೊಳಿಸಲು ಒಂದಿಷ್ಟು ಪ್ರಯತ್ನ ಮಾಡಲಿ ಎಂದರು. 

ಮಾಜಿ ಶಾಸಕ ವಸಂತ ಬಂಗೇರ ಅವರು ಈ ಹಿಂದೆಯೇ ಮಂಜೂರುಗೊಳಿಸಿದ್ದ ಎರಡು ಕಿಂಡಿ ಅಣೆಕಟ್ಟುಗಳು ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಹಾಗೂ ಕಡಿರುಧ್ಯಾವರ ಗ್ರಾಮಗಳಲ್ಲಿ ನಿರ್ಮಾಣಗೊಳ್ಳಲಿದ್ದು ಇದು ಪಶ್ಚಿಮ ವಾಹಿನಿ ಯೋಜನೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ, ತಾ.ಪಂ ಅಧ್ಯಕ್ಷೆ ದಿವ್ಯ ಜ್ಯೋತಿ,  ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಧರಣೇಂದ್ರ ಕುಮಾರ್, ಸಾಹುಲ್ ಹಮೀದ್, ಶೇಖರ ಕುಕ್ಕೇಡಿ, ನಮಿತ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ತಾ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಪಕ್ಷದ ಮುಖಂಡರುಗಳಾದ ಲೋಕೇಶ್ವರಿ ವಿನಯಚಂದ್ರ, ಸುಂದರಗೌಡ, ಗ್ರೇಸಿಯನ್ ವೇಗಸ್, ಪ್ರವೀಣ್ ಗೌಡ, ಜಗದೀಶ್, ಅಬ್ದುಲ್ ರಹಿಮಾನ್ ಪಡ್ಪು, ಮಸ್ತಾರ್ ಜಾನ್ ಮೆಹಬೂಬ್, ಬಿ.ಕೆ ವಸಂತ್, ನಾಗರಾಜ ಲಾಯಿಲ, ಹಾಜಿರಾ ಬೆಳ್ತಂಗಡಿ. ಹಾಗೂ ಇತರರು ಉಪಸ್ಥಿತರಿದ್ದರು.

'ಭಾರತದ ಪ್ರಧಾನಿ ಇದಕ್ಕೆಲ್ಲ ಉತ್ತರ ನೀಡಬೇಕಾಗಿದೆ'

ಎಲ್ಲವನ್ನೂ ಸರಿಮಾಡುತ್ತೆ ಎಂದು ಸ್ಥಾಪಿಸಿದ್ದ ನೀತಿ ಆಯೋಗ ಎಲ್ಲಿ ಹೋಯಿತು, ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ರಿಸರ್ವ್ ಬ್ಯಾಂಕ್ ಗಳಿಗೆ ಸ್ವತಂತ್ರವಾಗಿ ಯಾಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನ್ಯಾಯಾಧೀಶರುಗಳೇ ಬೀದಿಗೆ ಬಂದು ಪತ್ರಿಕಾಗೋಷ್ಟಿ ನಡೆಸುವಂತಾಗುತ್ತಿದೆ ಯಾಕೆ, ನಿರುದ್ಯೋಗ ಸಮಸ್ಯೆ ಇನ್ನಿಲ್ಲದಂತೆ ತಾಂಡವವಾಡುತ್ತಿದೆ, ಈ ಬಗ್ಗೆ ವರದಿ ನೀಡುವುದೇ ತಪ್ಪೆಂಬುದು ಸರಕಾರದ ನಿಲುವೇ, ರಾಫೇಲ್‍ನಲ್ಲಿ ಎಚ್.ಎ ಎಲ್ ಗಿಂತ ರಿಲಯನ್ಸ್ ಹೇಗೆ ಶ್ರೇಷ್ಠವಾಯಿತು ಇದಕ್ಕೆಲ್ಲ ಮೋದಿಯವರು ಉತ್ತರಿಸಬೇಕಾಗಿದೆ ಎಂದು ಯು.ಟಿ ಖಾದರ್ ತಿಳಿಸಿದರು.

ಬಾಂಜಾರು ನಿವಾಸಿಗಳಿಂದ ಮನವಿ

ನೆರಿಯ ಗ್ರಾಮದ ಬಾಂಜಾರುಮಲೆ ಪ್ರದೇಶದಲ್ಲಿ ವಾಸಿಸುತ್ತಿರುವ 37 ಮಲೆಕುಡಿಯ ಕುಟುಂಬಗಳಿಗೆ ಭೂ ನ್ಯಾಯ ಮಂಡಳಿಯಿಂದ ಮಂಜೂರಾಗಿರುವ  ಜಮೀನಿನ ಮಂಜೂರಾತಿಯನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಸರಕಾರ ಹೈಕೋರ್ಟಿನಲ್ಲಿ ರಿಟ್ ಅರ್ಜಿಗಳನ್ನು ದಾಖಲಿಸಿದ್ದು ಇದರಿಂದಾಗಿ ಈ ಆದಿವಾಸಿ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಗಮನಹರಿಸಿ ಸರಕಾರವು ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಸದ್ರಿ ಜಮೀನನನು ಈ ಕುಟುಂಬಗಳಿಗೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸುವ ಅರ್ಜಿಯನ್ನು ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ ಲಾಯಿಲ ಅವರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಉಸ್ತುವಾರಿ ಸಚಿವರಿಗೆ ಸಲ್ಲಿಸಿದರು.

ಇದನ್ನು ಪರಿಶೀಲಿಸಿದ ಸಚಿವರು ಈ ಬಗ್ಗೆ ಕಂದಾಯ ಸಚಿವರಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News