ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಶಾ ಜೇಮ್ಸ್

Update: 2019-02-21 13:34 GMT
ನಿಶಾ ಜೇಮ್ಸ್

ಉಡುಪಿ, ಫೆ.21: ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೇರಳ ಮೂಲದ 2013ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ನೇಮಕಗೊಂಡಿದ್ದಾರೆ.

ಉಡುಪಿ ಜಿಲ್ಲೆ 1997ರ ಆ.25ರಂದು ಅಸ್ತಿತ್ವಕ್ಕೆ ಬಂದಾಗ ಸವಿತಾ ಹಂಡೆ ಮೊದಲ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಬಳಿಕ ನೇಮಕಗೊಂಡ ಎರಡನೇ ಮಹಿಳಾ ಎಸ್ಪಿ ಇವರಾಗಿದ್ದಾರೆ.

ಕಳೆದ 13 ತಿಂಗಳಿಂದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಹಲವು ಪ್ರಕರಣಗಳಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಜಿಲ್ಲೆಯ ಜನರಿಂದ ಪ್ರಶಂಸೆಗೆ ಪಾತ್ರರಾಗಿರುವ ಲಕ್ಷ್ಮಣ್ ಬಿ.ನಿಂಬರಗಿ ಅವರನ್ನು ಬೆಂಗಳೂರಿನ ನಿಸ್ತಂತು (ವಯರ್‌ಲೆಸ್) ವಿಭಾಗಕ್ಕೆ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಲಕ್ಷ್ಮಣ್ ನಿಂಬರಗಿ ಸ್ಥಾನಕ್ಕೆ ಎಸ್ಪಿಯಾಗಿ ನೇಮಕಗೊಂಡಿರುವ ನಿಶಾ ಜೇಮ್ಸ್, ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯ ನಾಲ್ಕನೇ ಬೆಟಾಲಿಯನ್‌ನ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತಿದ್ದಾರೆ.

ಕೇರಳ ಮೂಲದವರಾದರೂ ದಿಲ್ಲಿಯಲ್ಲೇ ತಮ್ಮ ವಿದ್ಯಾಭ್ಯಾಸ ನಡೆಸಿರುವ ನಿಶಾ (33) ದಿಲ್ಲಿ ವಿವಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ 2006ರಲ್ಲಿ ಬಿ.ಎ.(ಆನರ್ಸ್‌) ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ (2008) ಪದವಿ ಪಡೆದಿದ್ದರು. 2012ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಿಶಾ ರಾಷ್ಟ್ರೀಯ ಮಟ್ಟದಲ್ಲಿ 179ನೇ ರ್ಯಾಂಕ್ ಪಡೆದಿದ್ದರು. ಎಜಿಎಂಯುಟಿ ಕೇಡರ್‌ನ ಐಪಿಎಸ್ ಅಧಿಕಾರಿಯಾದ ಇವರು 2013ರಲ್ಲಿ ತನ್ನದೇ ಬ್ಯಾಚ್‌ಮೇಟ್ ಆಗಿದ್ದ ಮೂಲತ: ದಕ್ಷಿಣ ಕನ್ನಡದ ಐಪಿಎಸ್ ಅಧಿಕಾರಿ ಡಾ. ಅನೂಪ್ ಎ.ಶೆಟ್ಟಿ ಅವರನ್ನು ಮದುವೆಯಾದ ಬಳಿಕ ಕರ್ನಾಟಕ ಕೇಡರ್‌ಗೆ ವರ್ಗಾವಣೆ ಗೊಂಡಿದ್ದರು.

2013ರಲ್ಲಿ ಚಿತ್ರದುರ್ಗದಲ್ಲಿ ತರಬೇತಿ ಅವಧಿಯನ್ನು ಮುಗಿಸಿದ ಅವರು, ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದಲ್ಲಿ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. 2017ರಲ್ಲಿ ಆರು ತಿಂಗಳು ರಾಯಚೂರಿನ ಎಸ್ಪಿ, ಬೆಂಗಳೂರಿನಲ್ಲಿ ಇಂಟೆಲಿಜೆನ್ಸ್ ವಿಭಾಗದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2018ರ ಜ.1ರಂದು ಮುನಿರಾಬಾದ್‌ನಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನ ಕಮಾಂಡೆಂಟ್ ಆಗಿಯೂ ಅವರು ಕೆಲಸ ಮಾಡಿದ್ದರು.

ಬೆಂಗಳೂರಿನಲ್ಲಿ ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್‌ನ ಕಮಾಂಡೆಂಟ್ ಆಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಮಹಿಳಾ ಸಿಬ್ಬಂದಿಗಳಿಗಾಗಿ ಬೆಳಗಾವಿಯಿಂದ ಬೆಂಗಳೂರುವರೆಗೆ 1700 ಕಿ.ಮೀ. ನಡೆದ ಸೈಕ್ಲಥಾನ್‌ನ ನೇತೃತ್ವವನ್ನು ಇವರು ವಹಿಸಿದ್ದರು.

ಜನಪ್ರಿಯತೆ ಪಡೆದ ಎಸ್ಪಿ:  2018ರ ಜ.1ರಂದು ಡಾ. ಸಂಜೀವ ಎಂ. ಪಾಟೀಲ್ ಅವರ ಸ್ಥಾನದಲ್ಲಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದ ಲಕ್ಷ್ಮಣ್ ಬಿ.ನಿಂಬರಗಿ, ಪೊಲೀಸ್ ವ್ಯವಸ್ಥೆಯಲ್ಲಿ ಮಾಡಿದ ಹಲವು ಸುಧಾರಣೆಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ. ಪಾಟೀಲ್‌ರು ಆರಂಭಿಸಿದ ನೇರ ಪೋನ್‌ಇನ್ ಕಾರ್ಯಕ್ರಮವನ್ನು ಮುಂದುವರಿಸಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ನಡೆಯುತಿದ್ದ ಹಲವು ಅಪರಾಧ ಪ್ರಕರಣಗಳನ್ನು, ಅದರಲ್ಲೂ ಗಾಂಜಾ ಪ್ರಕರಣಗಳನ್ನು ಸಾಕಷ್ಟು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀ ಅನುಮಾನಾಸ್ಪದ ಸಾವಿನ ಅತಿ ಸೂಕ್ಷ್ಮ ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಲ್ಲದೇ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹುಸೈನಬ್ಬ ಜೋಕಟ್ಟೆ ಪ್ರಕರಣ ಹಾಗೂ ಈಚೆಗೆ ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ತ್ವರಿತ ಗತಿಯಲ್ಲಿ ಬೇಧಿಸಿ, ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನೇ ಜೈಲಿಗೆ ತಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News