ಫೆ.22: ಬಜೆ ಅಣೆಕಟ್ಟಿಗೆ ರೈತರ ಮುತ್ತಿಗೆ

Update: 2019-02-21 13:28 GMT

ಉಡುಪಿ, ಫೆ. 21: ಉಡುಪಿ ನಗರಕ್ಕೆ ನೀರುಣಿಸುವ ಹಿರಿಯಡ್ಕ ಸಮೀಪದ ಬಜೆಯಲ್ಲಿ ಸೀತಾನದಿಗೆ ನಿರ್ಮಿಸಿರುವ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿನ ಸಂಗ್ರಹ ವಿದ್ದರೂ ಜಿಲ್ಲಾಡಳಿತ ಕಳೆದ 22 ದಿನಗಳಿಂದ ಬಜೆ ಅಣೆಕಟ್ಟು ಹಿನ್ನೀರು ಪ್ರದೇಶಗಳ ಕೃಷಿಕರಿಗೆ ನೀರೆತ್ತಲು ಅವಕಾಶ ನೀಡದಿರುವುದನ್ನು ವಿರೋಧಿಸಿ ಈ ಪರಿಸರದ ಕೃಷಿಕರೆಲ್ಲರೂ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ಫೆ.22ರ ಬೆಳಗ್ಗೆ 10ಗಂಟೆಗೆ ಬಜೆ ಅಣೆಕಟ್ಟಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಜಿಲ್ಲಾ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

ಜಿಲ್ಲಾಡಳಿತದ ಈ ಕ್ರಮದಿಂದ ಬಜೆ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿ ಭತ್ತವೂ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿರುವ ರೈತರು ಕಳೆದ ಎರಡು- ಮೂರು ವಾರಗಳಿಂದ ನೀರಿಲ್ಲದೇ ಒಣಗುತ್ತಿರುವುದನ್ನು ಅಸಹಾಯಕರಾಗಿ ನೋಡುವಂತಾಗಿದೆ. ಅಲ್ಲದೇ ವಿವಿಧ ತೋಟಗಾರಿಕಾ ಬೆಳೆಗಳಿಗೂ ನೀರಿಲ್ಲದೇ ಹಾನಿಗೊಳಲಾಗುತ್ತಿವೆ.

ಸೀತಾನದಿಗೆ ಕಾರ್ಕಳದ ಮಾಣೈಯಲ್ಲಿ ನಿರ್ಮಿಸಿರುವ ಅಣೆಕಟ್ಟಿನಲ್ಲಿ ನೀರು ಸೋರಿಕೆಯಿಂದ ಅನಗತ್ಯವಾಗಿ ಪೋಲಾಗುತ್ತಿದೆ. ಅಣೆಕಟ್ಟಿನ ಪರಿಸರದಲ್ಲಿ ಹೂಳು ತುಂಬಿರುವುದನ್ನು ತೆಗೆಸುವ ಕ್ರಮಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣದವರು, ಐಶಾರಾಮಿ ಜನರು ನೀರನ್ನು ಅನಗತ್ಯ ಕಾರ್ಯಗಳಿಗೆ ಬಳಸುತಿದ್ದರೂ ಜಿಲ್ಲಾಡಳಿತ ಯಾವುದೆ ಕ್ರಮ ಜರಗಿಸುತ್ತಿಲ್ಲ ಎಂದು ಸಂಘ ಪ್ರಕಟಣೆಯಲ್ಲಿ ದೂರಿದೆ.

ಸ್ಥಳೀಯ ಶಾಸಕರನ್ನು ಸೇರಿಸಿಕೊಂಡು ಜಿಲ್ಲಾಡಳಿತಕ್ಕೆ ರೈತರು ಈಗಾಗಲೇ ಹಲವು ಮನವಿಗಳನ್ನು ನೀಡಿದರೂ ಈ ಬಗ್ಗೆ ಗಮನ ಹರಿಸಿಲ್ಲ. ಆದರೆ ಈಗಾಗಲೇ ಕೃಷಿಯಿಂದ ವಿಮುಖರಾಗುತ್ತಿರುವ ಕೃಷಿಕರನ್ನು ಕುಡಿಯುವ ನೀರಿನ ಆದ್ಯತೆ ಹೆಸರಲ್ಲಿ ಸಹಜ ಹಾಗು ಕೃಷಿಗೆ ಅಗತ್ಯವಿರುವಷ್ಟು ನೀರನ್ನಾದರೂ ಬಳಸಲು ನೀಡದೆ ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಜಿಲ್ಲಾಡಳಿತದ ಈ ತಾರತಮ್ಯ ಧೋರಣೆ ವಿರುದ್ಧ ಜಿಲ್ಲೆಯ ರೈತರು ಒಗ್ಗಟ್ಟಾಗಿ ಪ್ರತಿಭಟಿಸಲು ರೈತರು ಶುಕ್ರವಾರ ಬಜೆ ಅಣೆಕಟ್ಟಿನ ಬಳಿ ಸೇರುವಂತೆ ವಿನಂತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News