ಲೋಬೋ ಶಾಸಕರಾಗಿ ಮಾಡಿದ್ದೇನು ?: ಬಿಜೆಪಿ ಪ್ರಶ್ನೆ

Update: 2019-02-21 14:19 GMT

ಮಂಗಳೂರು, ಫೆ.21: ಸಂಸದ ನಳಿನ್ ಕುಮಾರ್ ಕಟೀಲ್ ದ.ಕ.ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಮಾಜಿ ಶಾಸಕ ಜೆ.ಆರ್.ಲೋಬೊ ಮೊದಲು ತಾವು ಶಾಸಕರಾಗಿದ್ದಾಗ ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಪ್ರಶ್ನಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ನಳಿನ್ ಕುಮಾರ್‌ರ ಕಳೆದ 10 ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಂಬರ್ ವನ್ ಸಂಸದರಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಜೆ.ಆರ್.ಲೋಬೋ ಮುಂದಿನ ಚುನಾವಣೆಯ ಸಂದರ್ಭ ಜನತೆಯ ಬಳಿ ತೆರಳಲು ಯಾವುದೇ ವಿಷಯಗಳಿಲ್ಲದಿರುವುದರಿಂದ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯು ಲೋಕಸಭಾ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ. ಪ್ರಭಾರಿಗಳ ನೇಮಕ, ಚುನಾವಣಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಚುನಾವಣೆಯ ದೃಷ್ಟಿಯಿಂದ ಐದು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಫೆ.12ರಿಂದ ಮಾ.2ರವರೆಗೆ ‘ನನ್ನ ಪರಿವಾರ-ಬಿಜೆಪಿ ಪರಿವಾರ’ ಅಭಿಯಾನವನ್ನು ದೇಶವ್ಯಾಪಿಯಾಗಿ ಹಮ್ಮಿಕೊಂಡಿದೆ. ಅ ಅಭಿಯಾನದೊಂದಿಗೆ ಸುಮಾರು ಐದು ಕೋಟಿ ಕಾರ್ಯಕರ್ತರು ‘ತಮ್ಮ ಮನೆಯ ಮೇಲೆ ಬಿಜೆಪಿ ಧ್ವಜ’ವನ್ನು ಹಾರಿಸಲಿದ್ದಾರೆ. ಹೀಗೆ ಹಾರಿಸಲಾದ ಧ್ವಜದೊಂದಿಗೆ ತಮ್ಮ ಸೆಲ್ಫಿ ಫೋಟೊ ತೆಗೆದು ಅದನ್ನು ‘ಮೆರಾಪರಿವಾರ್ ಭಾಜಪ ಪರಿವಾರ್’ ಹ್ಯಾಶ್ ಟ್ಯಾಗ್‌ನೊಂದಿಗೆ ಟ್ವೀಟ್ ಹಾಗೂ ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಿದ್ದಾರೆ ಎಂದರು.

ಫೆ.24ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ರಾಜ್ಯಾದ್ಯಂತ ಕಾರ್ಯಕರ್ತರು 75 ಲಕ್ಷ ಮನೆಗಳಲ್ಲಿ ಪಕ್ಷದ ಧ್ವಜಾರೋಹಣ, ಕರಪತ್ರ ಮತ್ತು ಸ್ಟಿಕ್ಕರ್ ವಿತರಣೆ ಮಾಡಲಾಗುವುದು. ರಾಜ್ಯದ ಪ್ರತಿಯೊಂದು ಭೂತ್‌ನಲ್ಲಿ ಅಭಿಯಾನ ನಡೆಯಲಿದೆ ಎಂದು ಜಿತೇಂದ್ರ ಕೊಟ್ಟಾರಿ ಹೇಳಿದರು.

ಫೆ. 26ರಂದು ಸಂಜೆ 7 ಗಂಟೆಗೆ ‘ಕಮಲ ಜ್ಯೋತಿ ಸಂಕಲ್ಪ’ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಕೇಂದ್ರದ ಯೋಜನೆಗಳ ಲಾನುಭವಿಗಳು ಪ್ರತಿ ಭೂತ್‌ನಲ್ಲಿ ಒಂದೆಡೆ ಸೇರಿ ದೀಪಗಳನ್ನು ಹಚ್ಚಿ ದೀಪೋತ್ಸವ ಆಚರಿಸಲಿದ್ದಾರೆ. ಫೆ.28ರಂದು ಪ್ರಧಾನಮಂತ್ರಿಯೊಂದಿಗೆ ಸಂಘಟನಾ ಸಂವಾದ ಕಾಯಕ್ರವಿದ್ದು, ಇಡೀ ದೇಶದ ಬೂತ್ ಕಾರ್ಯಕರ್ತರೊಂದಿಗೆ ಒಂದೇ ಅವಧಿಯಲ್ಲಿ ಸಂವಾದ ನಡೆಸುವ ವ್ಯವಸ್ಥೆ ಆಗಲಿದೆ. ಫೆ.28ರಂದು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ 1,000 ಕಾರ್ಯಕರ್ತರ ಸಮಾವೇಶ ನಡೆಯಲಿದೆ. 2.50 ಲಕ್ಷ ಕಾರ್ಯಕರ್ತರು ಅಂದು ಪೂರ್ವಾಹ್ನ 11 ಗಂಟೆಗೆ ಪ್ರಧಾನಿಯೊಂದಿಗೆ ಸಂಘಟನಾ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಮಾ.2ರಂದು ಬಿಜೆಪಿ ಕಾರ್ಯಕರ್ತರು ವಿಜಯ ಸಂಕಲ್ಪ ಮೋಟಾರ್ ಬೈಕ್ ರ್ಯಾಲಿ ನಡೆಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಭಾಸ್ಕರಚಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ಸತೀಶ್ ಪ್ರಭು, ಸಂಜಯ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News