ಕಳವು ಪ್ರಕರಣ: ಆರೋಪಿಗೆ ಶಿಕ್ಷೆ

Update: 2019-02-21 15:23 GMT

ಉಡುಪಿ, ಫೆ. 21: ನಾಲ್ಕೂರು ಗ್ರಾಮ ಮಾರಾಳಿ ಶಾಲೆ ಹಕ್ಲು ಎಂಬಲ್ಲಿನ ಮಹಿಳೆಯೊಬ್ಬರ ಕರಿಮಣಿ ಸರವನ್ನು ಕಳವು ಮಾಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಉಡುಪಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ನಾಲ್ಕೂರು ಗ್ರಾಮದ ರಮೇಶ್ ಪೂಜಾರಿಗೆ ಆರು ತಿಂಗಳ ಶಿಕ್ಷೆ ಹಾಗೂ 3000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ರಮೇಶ ಪೂಜಾರಿ, 2009ರ ಜೂ.16ರಂದು ನಾಲ್ಕೂರು ಗ್ರಾಮದ ಗಂಗ ಪೂಜಾರ್ತಿ ಎಂಬವರ ಕರಿಮಣಿ ಸರವನ್ನು ಕಳವು ಮಾಡಿ, ಅದನ್ನು ಮಾರಾಟ ಮಾಡಿ ಒಂದು ದ್ರುವ ಚೈನನ್ನು ಖರೀದಿಸಿ, ಅದನ್ನು ಅಡವಿಟ್ಟು ಹಣ ಪಡೆದು ಅದರಿಂದ ತನ್ನ ಹೆಂಡತಿಯ ಕಪಾಲಿ ಉಂಗುರವನ್ನು ಅಡವಿಟ್ಟ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಿಂದ ಉಂಗುರವನ್ನು ಬಿಡಿಸಿ ತನ್ನ ಹೆಂಡತಿಗೆ ವಾಪಾಸ್ಸು ನೀಡಿದ್ದ. ಪೊಲೀಸರು ಆರೋಪಿಯನ್ನು ಹೆಬ್ರಿ ಬಸ್ ನಿಲ್ದಾಣದಲ್ಲಿ ಬಂಧಿಸಿ ಆತನಿಂದ ನಗದು 5,900 ರೂ., ಕರಿಮಣಿ ಸರ, ದ್ರುವ ಚೈನ್ ಮತ್ತು ಕಪಾಲಿ ಉಂಗುರವನ್ನು ಸ್ವಾಧೀನಪಡಿಸಿಕೊಂಡಿದ್ದರು.

ಈ ಬಗ್ಗೆ ಹೆಬ್ರಿ ಠಾಣೆಯ ಪೋಲೀಸ್ ಉಪನಿರೀಕ್ಷಕರಾಗಿದ್ದ ಸುರೇಶ್ ಕುಮಾರ್ ಪಿ. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಪ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಇರ್ಫಾನ್, ಪ್ರಕರಣದಲ್ಲಿ ಸಾಕ್ಷ್ಯ, ಪೂರಕ ಸಾಕ್ಷ್ಯ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಪ್ರಕರಣವು ಸಾಬೀತಾಗಿರುವುದಾಗಿ ತೀರ್ಪು ನೀಡಿ ಆರೋಪಿಗೆ 6 ತಿಂಗಳ ಸಜೆ ಮತ್ತು ಒಟ್ಟು 3,000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದರು.

ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News