×
Ad

ಯುಎಇ ವಿಶೇಷ ಒಲಿಂಪಿಕ್ಸ್‌ಗೆ ಮಣಿಪಾಲದ ಅರ್ಚನಾ

Update: 2019-02-21 21:51 IST

ಉಡುಪಿ, ಫೆ.21: ಯುಎಇಯ ಅಬುಧಾಬಿಯಲ್ಲಿ ಮಾ.14ರಿಂದ 21ರವರೆಗೆ ನಡೆಯುವ ವಿಶ್ವ ಬೇಸಿಗೆ ಗೇಮ್ಸ್‌ನ ವಿಶೇಷ ಒಲಿಂಪಿಕ್ಸ್‌ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್ ಅವರು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಈ ವಿಷಯವನ್ನು ಅರ್ಚನಾ ಅವರ ತಂದೆ, ಮಾಹೆ ವಿವಿಯ ಎಸ್ಟೇಟ್ ಮ್ಯಾನೇಜರ್ ಆಗಿರುವ ಜೈ ವಿಠಲ್ ತಿಳಿಸಿದ್ದಾರೆ. ಅರ್ಚನಾ ಅವರು ಅರ್ಚನಾ ಟ್ರಸ್ಟ್ ಹಾಗೂ ಮಾಹೆ ಜಂಟಿಯಾಗಿ ವಿಶೇಷ ಮಕ್ಕಳಿಗಾಗಿ ನಡೆಸುವ ‘ಆಸರೆ’ಯ ನಿವಾಸಿಯಾಗಿದ್ದಾರೆ.

ಅರ್ಚನಾ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗಳಿಸಿದ ಈಜುಗಾರ್ತಿಯಾಗಿದ್ದು, ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅಥ್ಲೀಟ್ ಗಳಿಗೆ ಮಾ.1ರಿಂದ 7ರವರೆಗೆ ಹೊಸದಿಲ್ಲಿಯಲ್ಲಿ ನಡೆಯುವ ಅಂತಿಮ ಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.28ರಂದು ಬೆಂಗಳೂರಿನಲ್ಲಿ ಈ ಕ್ರೀಡಾಪಟು ಗಳಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದವರು ತಿಳಿಸಿದರು.

ಅರ್ಚನಾ 2014ರ ಡಿಸೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಷ್ಯನ್ ಫೆಸಿಫಿಕ್ ಸ್ಪೆಷಲ್ ಒಲಿಂಪಿಕ್ಸ್‌ನ ಈಜು ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿದ್ದಾರೆ. 2012ರಲ್ಲಿ ಆಕೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಲ್ಲದೇ 2015ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ, ವಿಕಲಚೇತನರ ಸಬಲೀಕರಣ ಇಲಾಖೆಯ ವತಿಯಿಂದಲೂ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಅವರು ಸನ್ಮಾನಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News