ಉಡುಪಿ: ಜಿಲ್ಲೆಯಲ್ಲಿ ಮಂಗನ ಸಾವಿಗೆ ಬ್ರೇಕ್

Update: 2019-02-21 16:29 GMT

ಉಡುಪಿ, ಫೆ.21: ಕಳೆದ ತಿಂಗಳ 9ರಂದು ಜಿಲ್ಲೆಯಲ್ಲಿ ಮಂಗಗಳ ಸಾವು ವರದಿಯಾಗಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಭೀತಿ ಪ್ರಾರಂಭಗೊಂಡ ಬಳಿಕ ಮೊದಲ ಬಾರಿ ಗುರುವಾರ ಜಿಲ್ಲೆಯ ಯಾವುದೇ ಭಾಗದಿಂದ ಸತ್ತ ಮಂಗನ ಪತ್ತೆಯಾದ ವರದಿ ಬಂದಿಲ್ಲ.

ಇಂದು ಜಿಲ್ಲೆಯಲ್ಲಿ ಯಾವುದೇ ಮಂಗ ಸತ್ತ ವರದಿ ಬಂದಿಲ್ಲ. ಆದರೆ ಶಂಕಿತ ಮಂಗನಕಾಯಿಲೆಗಾಗಿ ಒಬ್ಬ ರೋಗಿಯ ರಕ್ತವನ್ನು ಪರೀಕ್ಷೆಗಾಗಿ ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯನ್ನು ಕಾಯಲಾಗುತ್ತಿದೆ. ಈವರೆಗೆ ಪರೀಕ್ಷೆಗೊಳಪಡಿಸಿದ 41 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಆದರೆ ಇಲಾಖೆಯ ವತಿಯಿಂದ ಕಾಯಿಲೆ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡುವ, ಜಾಗೃತಿ ಮೂಡಿಸುವ ಕಾರ್ಯಕ್ರಮ ಮುಂದುವರಿದಿದೆ. ಸಿದ್ಧಾಪುರ ಪಿಎಚ್‌ಸಿ, 74ಉಳ್ಳೂರು ಎಸ್‌ಟಿ ಕಾಲನಿಗಳಲ್ಲಿ ಇಂದು ಮೊಬೈಲ್ ಮೆಡಿಕಲ್ ಯೂನಿಟ್ ಮೂಲಕ ಗ್ರಾಮಸ್ಥರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂದವರು ತಿಳಿಸಿದರು.

ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಇಂದು ಸಹ ತಮ್ಮ ಮನೆ ಮನೆಗೆ ಭೇಟಿ ನೀಡಿ ಜ್ವರ ಪೀಡಿತರ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇಂದು 3290 ಮನೆಗಳಿಗೆ ಭೇಟಿ ನೀಡಿ ಜ್ವರ ಸರ್ವೆ ನಡೆಸಲಾಗಿದೆ. ಈವರೆಗೆ ಒಟ್ಟು 98,788 ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ಭೇಟಿ ನೀಡಿ ಕೆಎಫ್‌ಡಿ ಸಮೀಕ್ಷೆ ಕೈಗೊಂಡಿದ್ದಾರೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.

ಆರೋಗ್ಯ ತಂಡಗಳು ಇಂದು ಬೆಳ್ಮಣ್ ಚರ್ಚ್ ಹಾಲಿನಲ್ಲಿ ಕೆಎಫ್‌ಡಿ ಕುರಿತು ಜಾಗೃತಿ ಸಭೆ ನಡೆಸಿದರು. ಮುಂಡ್ಕೂರಿನಲ್ಲಿ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News