ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳವು ಆರೋಪಿಗಳು ಸೆರೆ

Update: 2019-02-21 16:46 GMT

ಮಂಗಳೂರು, ಫೆ.21: ನಗರದ ಮೂಡುಬಿದಿರೆ ಪೊಲೀಸ್ ಠಾಣಾ ಹಾಗೂ ಕೇರಳ ರಾಜ್ಯದ ಕಾಸರಗೋಡಿನ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗದ ಕುಖ್ಯಾತ ಸರಕಳ್ಳರಿಬ್ಬರನ್ನು ಬಂಧಿಸಿ, ಚಿನ್ನಾಭರಣ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ಸಿಸಿಬಿ ಪೊಲೀಸ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ತಾಲೂಕಿನ ಅಡ್ಯಾರ್-ಕಣ್ಣೂರು ನಿವಾಸಿಗಳಾದ ಕೆ.ನೂಮನ್ (23), ಸಂಶೀರ್ (21) ಬಂಧಿತ ಆರೋಪಿಗಳು.

ಇತ್ತೀಚೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಸಮಯ ಸರಕಳ್ಳತನ ಮಾಡುವ ಇಬ್ಬರು ಯುವಕರು ನೋಂದಣಿ ಸಂಖ್ಯೆ ಅಳವಡಿಸದೇ ಇರುವ ದ್ವಿಚಕ್ರ ವಾಹನದಲ್ಲಿ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದ್ವಿಚಕ್ರ ವಾಹನವನ್ನು ಬೆನ್ನಟ್ಟಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದರು.

ಬಂಧಿತ ಆರೋಪಿಗಳಿಂದ ಎರಡು ಚಿನ್ನದ ಸರ, ಎರಡು ಮೊಬೈಲ್ ಫೋನ್, ಒಂದು ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸರಕಳ್ಳತನ ಮಾಡುವ ಸಮಯ ವಾಹನದ ನಂಬರ್ ಪ್ಲೇಟ್‌ಗಳನ್ನು ಅಳವಡಿಸದೇ ಕೃತ್ಯವನ್ನು ಮಾಡುತ್ತಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,10,900 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮೂಡುಬಿದಿರೆ ಪ್ರಕರಣ:  ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂತ್ಯ ಎಂಬಲ್ಲಿ ಫೆ.15ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್‌ನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದೂರು ಪ್ರಕರಣ: ಕೇರಳ ರಾಜ್ಯ ಕಾಸರಗೋಡು ಜಿಲ್ಲೆ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಾರು ಫೆ.17ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್‌ನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಕಾಸರಗೋಡು-ಅದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಬಂಧಿತ ಆರೋಪಿಗಳ ಪೈಕಿ ನೂಮನ್ ಎಂಬಾತನ ವಿರುದ್ಧ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ ಎರಡು ಸರಕಳ್ಳತನ ಪ್ರಕರಣ, ಮಂಗಳೂರು ಪೂರ್ವ ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಸರಕಳ್ಳತನ ಹೀಗೆ ಒಟ್ಟು 8 ಪ್ರಕರಣ ದಾಖಲಾಗಿರುತ್ತದೆ. ಈತನು ಸುಮಾರು 15 ದಿನಗಳ ಹಿಂದೆ ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿರುವುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News