ಚಪ್ಪಲಿಯಿಲ್ಲದ ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷೆಗೆ ಪ್ರವೇಶವಿಲ್ಲ !

Update: 2019-02-21 17:04 GMT

ಪಾಟ್ನಾ,ಫೆ.21: ಬೋರ್ಡ್ ಪರೀಕ್ಷೆಗಳಲ್ಲಿ ವಂಚನೆಯನ್ನು ತಡೆಯುವ ವಿನೂತನ ಕ್ರಮವಾಗಿ ಬಿಹಾರ ಸರಕಾರವು 10ನೇ ತರಗತಿಯ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಚಪ್ಪಲಿಗಳನ್ನು ತೊಡುವುದನ್ನು ಕಡ್ಡಾಯಗೊಳಿಸಿ ಗುರುವಾರ ಆದೇಶಿಸಿದೆ.

ಶೂಗಳು ಮತ್ತು ಸಾಕ್ಸ್‌ಗಳನ್ನು ಧರಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸಲು ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಬಿಹಾರ ಶಾಲಾ ಪರೀಕ್ಷಾ ಮಂಡಳಿಯು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ವರ್ಷ ರಾಜ್ಯಾದ್ಯಂತ 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.

  ವ್ಯಾಪಕವಾಗಿರುವ ನಕಲು ಪಿಡುಗನ್ನು ತಡೆಗಟ್ಟುವ ಪ್ರಯತ್ನವಾಗಿ ಕೈಗೊಳ್ಳಲಾಗಿರುವ ಇತರ ಕ್ರಮಗಳಲ್ಲಿ ಅಳಿಸುವ ರಬ್ಬರ್ ಮತ್ತು ಬ್ಲೇಡ್‌ಗಳ ಬಳಕೆಯ ಮೇಲೆ ನಿಷೇಧವೂ ಸೇರಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀ.ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚಿನ ಜನರು ಸಮಾವೇಶಗೊಳ್ಳುವುದನ್ನು ತಡೆಯಲು ನಿಷೇಧಾಜ್ಞೆಯನ್ನೂ ಹೊರಡಿಸಲಾಗುವುದು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ಅವುಗಳ ವೀಡಿಯೊಗ್ರಫಿ ಮತ್ತು ಲೈವ್ ವೆಬ್‌ಕಾಸ್ಟಿಂಗ್‌ಗೂ ಆದೇಶಿಸಲಾಗುವುದು ಎಂದು ಅಧಿಕಾರಿಯೋರ್ವರು ತಿಳಿಸಿದರು.

ಇದೇ ಮೊದಲ ಬಾರಿಗೆ ರೋಲ್ ನಂಬರ್ ಮತ್ತು ಹೆಸರು ಸೇರಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯ ವಿವರಗಳನ್ನು ಉತ್ತರ ಪತ್ರಿಕೆಗಳ ಮೇಲೆ ಮುದ್ರಿಸಲಾಗುವುದು ಎಂದರು.

ಕಳೆದ ವರ್ಷ ಅಕ್ರಮಗಳಿಗಾಗಿ 1,000ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಂದ ಹೊರದಬ್ಬಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News