'ಪುತ್ತೂರು ರೈಲ್ವೆ ಕ್ರಾಸಿಂಗ್ ಓವರ್ ಬ್ರಿಡ್ಜ್ ಸಮಸ್ಯೆ ಅತಿ ಶೀಘ್ರ ಪರಿಹಾರ'

Update: 2019-02-21 17:05 GMT

ಪುತ್ತೂರು, ಫೆ. 21: ಇಲ್ಲಿನ ಜನರ ಬೇಡಿಕೆಯಾಗಿರುವ ಎಪಿಎಂಸಿ ರಸ್ತೆಯಲ್ಲಿನ ಮೇಲ್ಸೇತುವೆ ಯಾ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ತೊಡಕು ಗಳನ್ನು ಶೀಘ್ರವೇ ಪರಿಹರಿಸಿ ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನ ನಡೆಸಲಾಗುದು ಎಂದು ನೈಋತ್ಯ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಅಪರ್ಣಾ ಗಾರ್ಗ್ ತಿಳಿಸಿದ್ದಾರೆ.

ಅವರು ಗುರುವಾರ ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. 

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪುತ್ತೂರು ಎಪಿಎಂಸಿ ರೈಲ್ವೇ ಕ್ರಾಸಿಂಗ್ ತಪ್ಪಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಈ ಭಾಗದ ಜನರ ಹಲವು ಕಾಲದ ಬೇಡಿಕೆಯಾಗಿದೆ. ಇಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಒಂದು ಕೋಟಿಯ ಒಳಗಿನ ಮೊತ್ತದ ಯೋಜನೆಯಾದರೆ ನಾವೇ ವಿಭಾಗದ ನೇತೃತ್ವದಲ್ಲಿ ಕಾಮಗಾರಿ ನಡೆಸುತ್ತೇವೆ. ಅದಕ್ಕಿಂತ  ಹೆಚ್ಚಿನ ಮೊತ್ತದ  ಯೋಜನೆಯಾದರೆ ರೈಲ್ವೆಯಲ್ಲಿರುವ ನಿರ್ಮಾಣ ವಿಭಾಗದವರು ಇದರ ಹೊಣೆ ಹೊತ್ತುಕೊಳ್ಳುತ್ತಾರೆ. ಅದು ಕೂಡ 50-50 ಪಾಲುದಾರಿಕೆಯಲ್ಲಿ ನಡೆಯಬೇಕಾಗಿದೆ ಎಂದರು. 

ಮುಂದಿನ ಕೆಲವೇ ದಿನಗಳಲ್ಲಿ8 ರೈಲ್ವೆಯ ನಿರ್ಮಣ ವಿಭಾಗದವರು ಬಂದು ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಇದಾದ ಬಳಿಕ ಅಂಡರ್‍ಪಾಸ್ ಇಲ್ಲವೇ ಓವರ್‍ಬ್ರಿಡ್ಜ್‍ಗಳಲ್ಲಿ ಯಾವುದು ಇಲ್ಲಿಗೆ ಸೂಕ್ತ ಎಂಬ ಬಗ್ಗೆ ವರದಿ ತಯಾರಿಸುತ್ತಾರೆ. ನಂತರ ಅನುಷ್ಠಾನದ ಯೋಜನೆಯಗಳು ನಡೆಯಲಿದೆ ಎಂದು ತಿಳಿಸಿದರು. 

ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆ ಅಗಲೀಕರಣದ ಪ್ರಸ್ತಾವನೆಯನ್ನು 2018ರ ಆಗಸ್ಟ್ 8ರಂದು  ನೀಡಲಾಗಿದೆ. ಈ ಕಾಮಗಾರಿಗೆ ರೂ.5.97 ಕೋಟಿ ವೆಚ್ಚದ ಅಗತ್ಯವಿದೆ. ರಾಜ್ಯ ಸರಕಾರ ಈ ಮೊತ್ತವನ್ನು ಠೇವಣಿ ಇರಿಸಿದಲ್ಲಿ ಕಾಮಗಾರಿಯನ್ನು ರೈಲ್ವೇ ಇಲಾಖೆ ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ರೈಲ್ವೆ ವಿಭಾಗೀಯ ಎಂಜಿನಿಯರ್ ರವೀಂದ್ರ ಬಿರಾದಾರ್, ಹೆಚ್ಚುವರಿ ಎಂಜಿನಿಯರ್ ಕೃತ್ಯಾನಂದ್, ಕಮರ್ಷಿಯಲ್ ಮ್ಯಾನೇಜರ್ ಯತೀಶ್ ಕುಮಾರ್, ಸೆಕ್ಷನ್ ಎಂಜಿನಿಯರ್ ಕೆ.ಪಿ. ನಾಯ್ಡು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ ಎನ್. ಎಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News