ಉ.ಪ್ರದೇಶದಲ್ಲಿ ಸ್ಥಾನ ಹಂಚಿಕೆ ವಿವರಗಳನ್ನು ಪ್ರಕಟಿಸಿದ ಬಿಎಸ್‌ಪಿ-ಎಸ್‌ಪಿ ಮೈತ್ರಿಕೂಟ

Update: 2019-02-21 17:06 GMT

 ಲಕ್ನೋ,ಫೆ.21: ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷ ಮೈತ್ರಿಕೂಟದಲ್ಲಿ ಕೊನೆಯ ಕ್ಷಣದಲ್ಲಿ ಸ್ಥಾನ ಸಿಗಬಹುದು ಎಂಬ ಕಾಂಗ್ರೆಸ್ ಪಕ್ಷದ ಆಸೆಗೆ ಗುರುವಾರ ನೀರೆರಚಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉಭಯ ಪಕ್ಷಗಳ ನಡುವೆ ಅಂತಿಮ ಸ್ಥಾನಹಂಚಿಕೆ ವಿವರ ಮತ್ತು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.

ರಾಜ್ಯದ ಒಟ್ಟೂ 80 ಸ್ಥಾನಗಳ ಪೈಕಿ 75 ಸ್ಥಾನಗಳು ಅಂತಿಮ ಪಟ್ಟಿಯಲ್ಲಿದ್ದು, ಬಿಎಸ್‌ಪಿ 38 ಮತ್ತು ಎಸ್‌ಪಿ 37 ಸ್ಥಾನಗಳನ್ನು ಹಂಚಿಕೊಂಡಿವೆ. ಮಾಯಾವತಿಯವರು ನೀಡಿದ್ದ ಭರವಸೆಯಂತೆ ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಉಳಿದ ಮೂರು ಸ್ಥಾನಗಳು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಪಾಲಾಗುವ ನಿರೀಕ್ಷೆಯಿದೆ. ಮೈತ್ರಿಕೂಟದ ಈ ಪ್ರಕಟಣೆಯು ದಿಲ್ಲಿ ಗದ್ದುಗೆಯ ಹೆಬ್ಬಾಗಿಲು ಎಂದೇ ಪರಿಗಣಿಸಲಾಗಿರುವ ಉತ್ತರ ಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆಯನ್ನು ಹುಟ್ಟುಹಾಕಿದೆ.

ತನ್ನ ಪಕ್ಷವು ರಾಜ್ಯದಲ್ಲಿಯ ಎಲ್ಲ 80 ಸ್ಥಾನಗಳಿಗೂ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದರಾದರೂ,ಸಕ್ರಿಯ ರಾಜಕಾರಣದಲ್ಲಿ ಪ್ರಿಯಾಂಕಾ ಗಾಂಧಿಯವರ ಪ್ರವೇಶದ ಬಳಿಕ ಮಾಯಾವತಿ ಅವರು ಮರುಚಿಂತನೆ ಮಾಡಬಹುದು ಎಂದು ಪಕ್ಷದೊಳಗಿನ ಒಂದು ವರ್ಗವು ಈಗಲೂ ಆಸೆಯಿಟ್ಟುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News