ಗುಪ್ತಚರ ವೈಫಲ್ಯ, ಆರ್‌ಡಿಎಕ್ಸ್ ಮೂಲ ಸೇರಿ 5 ಪ್ರಶ್ನೆಗಳನ್ನು ಪ್ರಧಾನಿಯ ಮುಂದಿಟ್ಟ ಕಾಂಗ್ರೆಸ್

Update: 2019-02-21 17:11 GMT

ಹೊಸದಿಲ್ಲಿ,ಫೆ.21: ಕಳೆದ ವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ಕುರಿತು ಐದು ಪ್ರಶ್ನೆಗಳನ್ನು ಗುರುವಾರ ಮಂಡಿಸಿರುವ ಕಾಂಗ್ರೆಸ್,ಅವುಗಳಿಗೆ ಉತ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

ಪುಲ್ವಾಮಾ ದಾಳಿಯ ರೂವಾರಿ ಜೈಶೆ ಮುಹಮ್ಮದ್ ದಾಳಿಗೆ ಎರಡು ದಿನಗಳ ಮೊದಲು ಅಫಘಾನಿಸ್ತಾನದಲ್ಲಿಯ ಇಂತಹುದೇ ದಾಳಿಯ ವೀಡಿಯೊವೊಂದನ್ನು ಆನ್‌ಲೈನ್‌ನಲ್ಲಿ ಅಪ್‌ ಲೋಡ್ ಮಾಡಿತ್ತು ಮತ್ತು ಕಾಶ್ಮೀರದಲ್ಲಿ ಇಂತಹುದೇ ದಾಳಿಯ ಎಚ್ಚರಿಕೆಯನ್ನು ನೀಡಿತ್ತು.

 ಇದು ಗುಪ್ತಚರ ವೈಫಲ್ಯ ಪ್ರಕರಣ ಎಂದು ತನಿಖಾಧಿಕಾರಿಗಳು ಅನೌಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಸಿಐಡಿ ಪೊಲೀಸರು ಈ ವೀಡಿಯೊವನ್ನು ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿದ್ದವು.

ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ಬೃಹತ್ ಗುಪ್ತಚರ ವೈಫಲ್ಯದ ಹೊಣೆಯನ್ನು ಏಕೆ ಒಪ್ಪಿಕೊಂಡಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ

ಜೈಶೆ ಮುಹಮ್ಮದ್ ಬಿಡುಗಡೆಗೊಳಿಸಿದ್ದ ಬೆದರಿಕೆಯ ವೀಡಿಯೋವನ್ನು ಸರಕಾರವು ಕಡೆಗಣಿಸಿದ್ದು ಏಕೆ ಎಂದೂ ಅದು ಪ್ರಶ್ನಿಸಿದೆ.

ದಾಳಿಯಲ್ಲಿ ಬಳಕೆಯಾಗಿದ್ದ ಬೃಹತ್ ಪ್ರಮಾಣದ ಆರ್‌ಡಿಎಕ್ಸ್ ಸ್ಥಳೀಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಮತ್ತು ಆತನ ಸಹಚರರಿಗೆ ಎಲ್ಲಿಂದ ಸಿಕ್ಕಿತ್ತು ಮತ್ತು ಬಿಗು ಭದ್ರತೆಯ ನಡುವೆಯೂ ಆರ್‌ಡಿಎಕ್ಸ್ ತುಂಬಿದ್ದ ವಾಹನ ಸೇನಾ ವಾಹನಗಳ ಸಾಲಿನ ಬಳಿಗೆ ತಲುಪಿದ್ದು ಹೇಗೆ ಎನ್ನುವುದು ಕಾಂಗ್ರೆಸ್‌ನ ಮೂರನೇ ಪ್ರಶ್ನೆಯಾಗಿದೆ.

 ಅರೆ ಮಿಲಿಟರಿ ಪಡೆಗಳ ಸಿಬ್ಬಂದಿಗಳನ್ನು ವಾಯುಮಾರ್ಗದ ಮೂಲಕ ಸಾಗಿಸುವ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ಮನವಿಗಳನ್ನು ಗೃಹ ಸಚಿವಾಲಯವು ತಿರಸ್ಕರಿಸಿದ್ದು ಏಕೆ ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.

ನರೇಂದ್ರ ಮೋದಿ ಸರಕಾರದ ಆಡಳಿತದಲ್ಲಿ 488 ಯೋಧರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು ಏಕೆ ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕಲು ನೋಟು ನಿಷೇಧ ಕ್ರಮವು ವಿಫಲಗೊಂಡಿದ್ದೇಕೆ ಎನ್ನುವುದು ಕಾಂಗ್ರೆಸ್‌ನ ಐದನೇ ಪ್ರಶ್ನೆಯಾಗಿದೆ. ನವೆಂಬರ್,2016ರ ನೋಟು ನಿಷೇಧ ಘೋಷಣೆಯು ನಕಲಿ ನೋಟುಗಳ ಛಾಯಾ ಆರ್ಥಿಕತೆಯ ಮೂಲಕ ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ನಿಲ್ಲಿಸುವ ಉದ್ದೇಶವನ್ನು ಹೊಂದಿತ್ತು.

ಪುಲ್ವಾಮಾ ಘಟನೆಯ ಒಂದು ವಾರದ ಬಳಿಕ ಕಾಂಗ್ರೆಸ್ ಸರಕಾರದ ವಿರುದ್ಧ ದಾಳಿ ನಡೆಸಿದೆ. ದಾಳಿಯ ಬಳಿಕ ತನ್ನ ರಾಜಕೀಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಅದು,ಸಂತ್ರಸ್ತ ಕುಟುಂಬಗಳನ್ನು ಬೆಂಬಲಿಸಲು ಮತ್ತು ಸರಕಾರದೊಡನೆ ಏಕತೆಯನ್ನು ಪ್ರದರ್ಶಿಸಲು ಇದು ಸಮಯವಾಗಿದೆ ಎಂದು ಹೇಳಿತ್ತು. ಆದರೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಟ್ವಿಟರ್‌ನಲ್ಲಿ ಸರಕಾರದ ವಿರುದ್ಧ ದಾಳಿಗೆ ನಾಂದಿ ಹಾಡಿದ್ದಾರೆ.

ಪುಲ್ವಾಮ ದಾಳಿ ನಡೆದಾಗ ಮೋದಿ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ ವಾಹಿನಿಗಾಗಿ ಜಿಮ್ ಕಾರ್ಬೆಟ್ ಪಾರ್ಕ್‌ನಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಆದರೆ ದಾಳಿಯ ಮಾಹಿತಿ ಲಭಿಸಿದ ತಕ್ಷಣ ದಿಲ್ಲಿಗೆ ವಾಪಸಾಗುವ ಬದಲು ಚಿತ್ರೀಕರಣವನ್ನು ಮುಂದುವರಿಸಿದ್ದರು,ಅಲ್ಲದೆ ಬೋಟ್ ವಿಹಾರಕ್ಕೂ ತೆರಳಿದ್ದರು ಎಂದೂ ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News