ಪಟ್ರಮೆ: ಗ್ರಾಮಸಭೆಯ ನಿರ್ಣಯ ಅನುಷ್ಠಾನವಾಗದಿರುವುದನ್ನು ವಿರೋಧಿಸಿ ಬಾಯಿಗೆ ಬಟ್ಟೆ ಕಟ್ಟಿ ಪ್ರತಿಭಟನೆ

Update: 2019-02-21 17:19 GMT

ಬೆಳ್ತಂಗಡಿ, ಫೆ. 21: ಪಟ್ರಮೆ ಗ್ರಾಮಸಭೆಯ ನಿರ್ಣಯಗಳ ಅನುಷ್ಠಾನವಾಗದಿರುವುದನ್ನು ವಿರೋಧಿಸಿ “ರಸ್ತೆ ದುರಸ್ತಿಗೊಳಿಸಿ ಗ್ರಾಮ ಸಭೆಯ ತೀರ್ಮಾನದ ಮಾನ ಉಳಿಸಿ” ಎಂಬ ಬೇಡಿಕೆಯೊಂದಿಗೆ ಸುಮಾರು ಎಪ್ಪತ್ತಕೂ ಹೆಚ್ಚು ಮಂದಿ ಗ್ರಾಮಸ್ಥರು ಬಾಯಿಗೆ ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.  

ಗುರುವಾರ ಗ್ರಾಮ ಪಂಚಾಯತಿನಲ್ಲಿ ಗ್ರಾಮ ಸಭೆ ಆರಂಭವಾಗುತ್ತಿದ್ದಂತೆಯೇ ಆಗಮಿಸಿದ್ದ ಗ್ರಾಮಸ್ಥರಲ್ಲಿ ಹೆಚ್ಚಿನ ಜನರು ಸಭೆಯಿಂದ ಹೊರಬಂದು ಬಾಯಿಗೆ ಬಟ್ಟೆ ಕಟ್ಟು ಪ್ರತಿಭಟನೆ ಆರಂಭಿಸಿದರು.

ನೋಡಲ್‍ ಅಧಿಕಾರಿ, ಜಯಕೀರ್ತಿ, ಜಿಲ್ಲಾ ಪಂಚಾಯತು ಸದಸ್ಯರಾದ ಕೊರಗಪ್ಪ ನಾಯ್ಕ, ಪಂಚಾಯತು ಅಧ್ಯಕ್ಷ ನವೀನ ಕಜೆ ಪ್ರತಿಭಟನಾಕರಾರರ ಬಳಿ ಬಂದು ಪ್ರತಿಭಟನೆ ನಿಲ್ಲಿಸಿ, ಗ್ರಾಮ ಸಭೆಗೆ ಬನ್ನಿ ನಿಮ್ಮ ಸಮಸ್ಯೆಗಳಿಗೆ ನಿರ್ಣಯ ಕೈಗೊಂಡು ಪರಿಹರಿಸೋಣ ಎಂದೂ, ರಸ್ತೆಗೆ 3 ಕೋಟಿ ರೂ. ಮಂಜೂರಾಗಲಿದೆ ಎಂದೂ, ಹೊಳೆಯ ನೀರು ಕೊಡಿಸಲು ಕೂಡಾ ಕ್ರಮ ಕೈಗೊಳ್ಳೋಣ ಎಂದು ತಿಳಿಸಿದರು.

ಅದಕ್ಕೆ ಪ್ರತಿಭಟನಾಕಾರರ ಪರ ಬಿ.ಎಂ.ಭಟ್ ಮೌನ ಮುರಿದು “ಈ ಮೊದಲೇ ಗ್ರಾಮ ಸಭೆಯಲ್ಲಿ ಹಲವು ಬಾರಿ ತೀರ್ಮಾನವಾಗಿದ್ದರೂ ಕಳೆದ 8 ವರ್ಷಗಳಿಂದ ದುರಸ್ತಿಯಾಗದ ರಸ್ತೆ, ಹೊಳೆಯಿಂದ ನೀರು ಕೊಡಿ ಎಂದು ಹಲವು ಗ್ರಾಮ ಸಭೆಗಳ ತೀರ್ಮಾನವಾಗಿದ್ದರೂ ಜಾರಿ ಆಗಿಲ್ಲ. ಅರಣ್ಯ ವಾಸಿಗಳ ಪರಗ್ರಾಮ ಸಭೆ ಕಾನೂನು ಬದ್ದವಾಗಿ ನಿರ್ಣಯ ಕೈಗೊಂಡರೂ ಒಕ್ಕಲೆಬ್ಬಿಸುವಂತಹ  ಕಾನೂನುಬಾಹಿರ ನೋಟೀಸುಗಳು ಬರುತ್ತಿವೆ. ಗ್ರಾಮಸಭೆಯಲ್ಲಿ ತೆಗೆದುಕೊಳ್ಳುವ ನಮ್ಮ ತೀರ್ಮಾನಗಳಿಗೆ ಬೆಲೆಯೇಇಲ್ಲದ ಮೇಲೆ ಗ್ರಾಮಸ್ಥರ ಮಾನತೆಗಯುವ ಕಡೆ ನಾವ್ಯಾಕೆ ಬರಬೇಕು? ಸಭೆಗೆ ಬರುವುದಿಲ್ಲ ಎಂದು ತಿಳಿಸಿದರು. ಬಳಿಕ ಹೊರಗಿದ್ದ ಸುಮಾರು 72 ಜನರನ್ನು ಬಿಟ್ಟು ಒಳಗಿದ್ದವರು ಸೇರಿ ಗ್ರಾಮ ಸಭೆಯನ್ನು ನಡೆಸಿ ಅಧಿಕಾರಿಗಳು ನಿರ್ಗಮಿಸಿದರು.

ಇದಾದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಹೋರಾಟದ ನೇತೃತ್ವನ್ನು ಕಮ್ಯೂನಿಸ್ಟ್ ಮುಖಮಡರಾದ ನ್ಯಾಯವಾದಿ ಬಿ.ಎಂ.ಭಟ್, ಮಹಮದ್‍ಅನಸ್, ದನಂಜಯಗೌಡ, ವಸಂತಟೈಲರ್, ಚೋಮ, ಹನೀಫ್, ಝಖಾರಿಯ, ಡೊಂಬಯಗೌಡ, ವೇದಾವತಿಮೊದಲಾದವರು ವಹಿಸಿದ್ದರು. ಗ್ರಾಮ ಪಂಚಾಯತು ಸದಸ್ಯರುಗಳಲ್ಲಿ ಹಾಜರಿದ್ದ ಶ್ಯಾಮರಾಜ್ ಮತ್ತು ಶೀಲಾವತಿ ಅವರುಗಳು ಹೊರಗಡೆ ಬಾಗಿಲ ಬಳಿ ನಿಂತು ಬಹುಸಂಖ್ಯಾತ ಜನರು ಹೊರಗಿರುವಾಗ ನಾವು ಗ್ರಾಮ ಸಭೆಯಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ಹೊರಗಡೆಯೇ ನಿಂತುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News