ಬಂಟ್ವಾಳ: ಫೆ.23ರಿಂದ ಮತದಾರರ ವಿಶೇಷ ನೋಂದಣಿ ಅಭಿಯಾನ

Update: 2019-02-21 17:28 GMT

ಬಂಟ್ವಾಳ, ಫೆ. 21: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೆ ಇರುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕುರಿತು ಫೆ.23, 24 ಮತ್ತು ಮಾ. 2, 3ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ. ಬಂಟ್ವಾಳ ತಾಲೂಕಿನ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಇರುತ್ತದೆ ಎಂದು ತಹಶೀಲ್ದಾರ್ ರಶ್ಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮತದಾರರ ಪಟ್ಟಿಗೆ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಈ ಅಭಿಯಾನ ಇರಲಿದೆ. ವಯಸ್ಸಿನ ಕುರಿತ ದಾಖಲೆಗಳು, ವಾಸಸ್ತಳದ ದಾಖಲೆಗಳು, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಬರುವಾಗ ತರಬೇಕು. ಬೆಳಗ್ಗೆ 10 ರಿಂದ ಸಂಜೆ 5:30ರವರೆಗೆ ಈ ಅಭಿಯಾನ ನಡೆಯುವುದು.

ವಯಸ್ಸಿನ ಕುರಿತು ಶಾಲಾ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಆಧಾರ್ ಕಾರ್ಡು, ಪಾಸ್ ಪೋರ್ಟ್, ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿಗಳು, ಪಾನ್ ಕಾರ್ಡ್, ಹಾಗೂ ವೈದ್ಯಕೀಯ ಪ್ರಮಾಣಪತ್ರ ಬೇಕು. ವಾಸಸ್ಥಳದ ಕುರಿತು ಪಡಿತರ ಚೀಟಿ, ಆಧಾರ್ ಕಾರ್ಡು, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್ ಪಾವತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬಾಡಿಗೆ ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳು ಅಗತ್ಯ ಎಂದು ಪ್ರಕಟನೆ ತಿಳಿಸಿದೆ.

18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ಅನಿವಾಸಿ ಭಾರತೀಯರು ಸೇರ್ಪಡೆ ಮಾಡಲು, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು, ಹೆಸರು, ತಂದೆ ಹೆಸರು, ಮನೆ ವಿಳಾಸ, ವಯಸ್ಸು, ಭಾವಚಿತ್ರಕ್ಕೆ ಸಂಬಂಧಿಸಿ ದೋಷಗಳಿದ್ದರೆ ಸರಿಪಡಿಸಲು, ಒಂದೇ ವಿಧಾನಸಭೆ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದರೆ ವಿವಿಧ ನಮೂನೆಯ ಅರ್ಜಿಗಳನ್ನು ಭರ್ತಿ ಮಾಡಿ ಕೊಡಬಹುದು.

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸದ, ವರ್ಗಾಯಿಸಲು ಬಾಕಿ ಇರುವ ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕದವರ ಅನುಕೂಲಕ್ಕಾಗಿ ಬಂಟ್ವಾಳ ತಾಲೂಕಿನಾದ್ಯಂತ ಫೆ 23, 24 ಹಾಗೂ ಮಾರ್ಚ್ 2, 3 ರಂದು ಎಲ್ಲಾ ಮತಗಟ್ಟೆಗಳಲ್ಲಿ ಮಿಂಚಿನ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಅರ್ಹ ಮತದಾರರು ಈ ವಿಶೇಷ ನೋಂದಣಿ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News