ಮುಂಬೈಯತ್ತ ಧಾವಿಸಿದ 50,000 ರೈತರು: ಪಾದಯಾತ್ರೆ ತಡೆಯಲು ಸರಕಾರದ ತಂತ್ರಗಳು ವಿಫಲ

Update: 2019-02-21 17:31 GMT

ಹೊಸದಿಲ್ಲಿ,ಫೆ.21: ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸುಮಾರು 50,000 ರೈತರು ನಾಸಿಕ್‌ ನಿಂದ ಮುಂಬೈಗೆ ಪಾದಯಾತ್ರೆ ಆರಂಭಿಸಿದ್ದಾರೆ. ಸಿಪಿಐ(ಎಂ)ನ ಅಂಗಸಂಸ್ಥೆ ಅಖಿಲ ಭಾರತ ಕಿಸಾನ್ ಸಂಘ (ಎಐಕೆಎಸ್) ಕರೆ ನೀಡಿರುವ ಈ ಪಾದಯಾತ್ರೆ ಫೆಬ್ರವರಿ 20ರಂದು ಆರಂಭವಾಗಬೇಕಿದ್ದರೂ ಥಾಣೆ ಮತ್ತು ಪಾಲ್ಗರ್‌ನಿಂದ ಆಗಮಿಸಬೇಕಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಕಾರಣ ವಿಳಂಬವಾಯಿತು.

ಥಾಣೆ ಮತ್ತು ಪಾಲ್ಗರ್‌ನ ಸುಮಾರು 15,000 ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಮಾಧ್ಯಮಗಳು ಈ ವಿಷಯದ ಮೇಲೆ ಬೆಳಕು ಚೆಲ್ಲಿದಾಗ ಸರಕಾರ ತನ್ನ ಇರಾದೆಯಿಂದ ಹಿಂದೆ ಸರಿಯಿತು ಎಂದು ಎಐಕೆಎಸ್ ಅಧ್ಯಕ್ಷ ಅಶೋಕ್ ಧವಳೆ ತಿಳಿಸಿದ್ದಾರೆ. ಥಾಣೆ ಮತ್ತು ಪಾಲ್ಗರ್‌ನ ರೈತರು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮನ್ನು ಸೇರಿದರು. ಅದಾಗಲೇ ರಾತ್ರಿಯಾಗಿದ್ದ ಕಾರಣ ನಾವು ಮರುದಿನ ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿದೆವು. ಮರುದಿನ ಬೆಳಿಗ್ಗೆ 50,000 ರೈತರು ಮುಂಬೈಯತ್ತ ಪ್ರಯಾಣ ಬೆಳೆಸಿದೆವು ಎಂದು ಧವಳೆ ತಿಳಿಸಿದ್ದಾರೆ.

ಈ ಸಮಯವನ್ನು ಸರಕಾರ ನಮ್ಮ ಜೊತೆ ಮಾತುಕತೆಗೆ ಬಳಸಿಕೊಂಡಿತು. ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಎಐಕೆಎಸ್‌ನ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸರಕಾರ ನಮ್ಮ ಕೆಲವೊಂದು ಬೇಡಿಕೆಗಳನ್ನಷ್ಟೇ ಸ್ವೀಕರಿಸಬಹುದು ಎಂದು ಅವರು ತಿಳಿಸಿದರು. ಹಾಗಾಗಿ ನಾವು ನಮ್ಮ ಪ್ರತಿಭಟನಾ ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿದೆವು ಎಂದು ಧವಳೆ ತಿಳಿಸಿದ್ದಾರೆ. ಪ್ರತಿಭಟನಾಕಾರರು ತಮ್ಮ ಜೊತೆ ವಾಹನಗಳಲ್ಲಿ ಅಕ್ಕಿ, ಧಾನ್ಯ, ಎಣ್ಣೆ ಮತ್ತು ಉಪ್ಪನ್ನೂ ಕೊಂಡೊಯ್ಯುತ್ತಿದ್ದಾರೆ. ಫೆಬ್ರವರಿ 27ರಂದು ಪಾದಯತ್ರೆ ಮುಂಬೈ ತಲುಪುವ ನಿರೀಕ್ಷೆಯಿದ್ದು ಅಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಧವಳೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News