ರಿಲಯನ್ಸ್ ಸಂಸ್ಥೆಯ ಅರ್ಜಿ ದಾರಿ ತಪ್ಪಿಸುವ ಕಪಟ ಚೀರಾಟ: ಹೈಕೋರ್ಟ್

Update: 2019-02-21 17:47 GMT

ಮುಂಬೈ, ಫೆ.21: ಅನಿಲ್ ಅಂಬಾನಿ ಮಾಲಕತ್ವದ ರಿಲಯನ್ಸ್ ಸಮೂಹ ಸಂಸ್ಥೆಯ ಅಡವಿರಿಸಿದ ಶೇರುಗಳನ್ನು ಮಾರಾಟ ಮಾಡಿರುವ ಎಡೆಲ್‌ವೀಸ್ ಸಮೂಹ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡು ತನಗೆ ಪರಿಹಾರ ಒದಗಿಸಿಕೊಡಬೇಕು ಎಂಬ ರಿಲಯನ್ಸ್ ಸಂಸ್ಥೆಯ ವಾದವನ್ನು ಬಾಂಬೆ ಹೈಕೋರ್ಟ್ ತಳ್ಳಿಹಾಕಿದೆ. ಅಲ್ಲದೆ ರಿಲಯನ್ಸ್ ಸಂಸ್ಥೆಯ ಅರ್ಜಿ ದಾರಿ ತಪ್ಪಿಸುವ ಮತ್ತು ಕಪಟ ಚೀರಾಟದಂತಿದೆ ಎಂದು ಹೈಕೋರ್ಟ್ ತಿಳಿಸಿದೆ .

ಮೇಲ್ನೋಟದ ಆಧಾರದಲ್ಲಿ ಈ ಹೇಳಿಕೆ ನೀಡಿದ್ದು ತನ್ನ ಅಂತಿಮ ತೀರ್ಪು ಇನ್ನಷ್ಟೇ ಬರಬೇಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಡವಿರಿಸಿದ ಶೇರುಗಳನ್ನು ಮಾರಾಟ ಮಾಡುವ ಮುನ್ನ ತನಗೆ ಸಾಕಷ್ಟು ಕಾಲಾವಧಿಯ ನೋಟಿಸ್ ನೀಡಬೇಕಿತ್ತು ಎಂಬ ರಿಲಯನ್ಸ್ ಸಂಸ್ಥೆಯ ವಾದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಫಿರ್ಯಾದಿದಾರರ ಈ ವಿಚಿತ್ರ ವಾದ ಆಶ್ಚರ್ಯಕರವಾಗಿದೆ. ಒಪ್ಪಂದಕ್ಕೆ ಸಹಿ ಹಾಕಿದಾಗ ಒಂದು ದಿನದ ನೋಟಿಸ್ ಸಾಕು ಎಂಬ ಷರತ್ತಿಗೆ ಸಹಿ ಹಾಕಲಾಗಿದೆ. ಆದ್ದರಿಂದ ಫಿರ್ಯಾದಿದಾರರ ನಿಲುವು ಕಪಟ ಮತ್ತು ದಾರಿ ತಪ್ಪಿಸುವಂತದ್ದು ಎಂದು ಹೇಳಬಹುದು. ಸತತ ತಪ್ಪು ಎಸಗಿದ ಬಳಿಕವೂ ಫಿರ್ಯಾದಿದಾರರು ನೋಟಿಸ್ ಅವಧಿಯನ್ನು ವಿಸ್ತರಿಸಲು ಹೇಳಿರಲಿಲ್ಲ. ಕರ್ತವ್ಯ ಲೋಪ ಎಸಗಿದ್ದಕ್ಕೆ ಸಂಸ್ಥೆ ಬಡ್ಡಿ ನೀಡಲಿಲ್ಲ, ಸೆಕ್ಯುರಿಟಿ ರೇಶಿಯೊವನ್ನು ಉನ್ನತ ದರ್ಜೆಗೇರಿಸಲು ಕ್ರಮ ಕೈಗೊಂಡಿಲ್ಲ, ಅಲ್ಲದೆ ತಾವು ಹೇಗೆ ಮರುಪಾವತಿ ಮಾಡುತ್ತೇವೆ ಎಂಬ ಬಗ್ಗೆ ಪ್ರತಿವಾದಿಗಳಿಗೆ ಮಾಹಿತಿ ನೀಡಿಲ್ಲ. ಯಾವುದೇ ಪತ್ರಕ್ಕೆ ಉತ್ತರಿಸುವ ಗೊಡವೆಗೂ ಹೋಗದೆ ಈಗ ನೋಟಿಸ್ ಅವಧಿಯ ಬಗ್ಗೆ ತಕರಾರು ಎತ್ತಿ ಪ್ರಯೋಜನವೇನು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಪ್ರತಿವಾದಿಗಳು(ಎಡೆಲ್‌ವೀಸ್ ಸಮೂಹ ಸಂಸ್ಥೆ) ಮಾಡಿದ್ದು ತಪ್ಪೆಂದು ನನಗನಿಸುವುದಿಲ್ಲ ಎಂದು ನ್ಯಾಯಮೂರ್ತಿ ಕೆ.ಆರ್.ಶ್ರೀರಾಮ್ ಅಭಿಪ್ರಾಯಪಟ್ಟರು. ತಮಗೆ ನಷ್ಟವಾಗಿದೆ ಎಂದು ಹೇಳುವ ವಾದಿಗಳು, ಎಷ್ಟು ನಷ್ಟವಾಗಿದೆ ಎಂಬುದನ್ನು ಪುರಾವೆ ಸಹಿತ ನಿರೂಪಿಸಲು ವಿಫಲವಾಗಿದ್ದಾರೆ. ಒಪ್ಪಂದದ ಪ್ರಕಾರ ಹಾಗೂ ಅನ್ವಯವಾಗುವ ಕಾನೂನಿನ ಪ್ರಕಾರ ಪ್ರತಿವಾದಿಗಳು ತಮ್ಮ ಹಕ್ಕು ಚಲಾಯಿಸುವುದನ್ನು ತಡೆಯಲಾಗದು ಎಂದು ತಿಳಿಸಿದ ನ್ಯಾಯಮೂರ್ತಿಗಳು, ರಿಲಯನ್ಸ್ ಸಮೂಹ ಸಂಸ್ಥೆಯ ಅರ್ಜಿಯನ್ನು ತಳ್ಳಿ ಹಾಕಿದರು.

   ಕೇವಲ ನಾಲ್ಕು ದಿನಗಳಲ್ಲಿ , ರಿಲಯನ್ಸ್ ಸಮೂಹ ಸಂಸ್ಥೆಗಳ ಶೇರುಗಳ ಬೆಲೆಯಲ್ಲಿ ಶೇ.55ರಷ್ಟು ಕುಸಿತವಾಗಿ ತನಗೆ 13,000 ಕೋಟಿ ರೂ. ನಷ್ಟವಾಗಿದೆ. ಎಡೆಲ್‌ವೀಸ್ ಸಮೂಹ ಸಂಸ್ಥೆ ಹಾಗೂ ಎಲ್ ಆ್ಯಂಡ್ ಟಿ ಫೈನಾನ್ಸ್ ಸಂಸ್ಥೆಯ ಅಕ್ರಮ, ಪ್ರೇರೇಪಿತ ಹಾಗೂ ಸಂಪೂರ್ಣ ಅಸಮರ್ಥನೀಯ ಕ್ರಮದಿಂದಾಗಿ ಈ ನಷ್ಟ ಸಂಭವಿಸಿದ್ದು ಎರಡೂ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡು ತನಗಾದ ನಷ್ಟಕ್ಕೆ ಪರಿಹಾರ ತೆಗೆಸಿಕೊಡಬೇಕು ಎಂದು ರಿಲಯನ್ಸ್ ಸಮೂಹ ಸಂಸ್ಥೆ ಫೆಬ್ರವರಿ 8ರಂದು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News