ಕಪ್ಪುಹಣ ಕುರಿತ ವರದಿಗಳನ್ನು ಬಹಿರಂಗಗೊಳಿಸಿ: ವಿತ್ತ ಸಚಿವಾಲಯಕ್ಕೆ ಸಂಸದೀಯ ಸಮಿತಿ ನಿರ್ದೇಶ

Update: 2019-02-21 17:55 GMT

ಹೊಸದಿಲ್ಲಿ,ಫೆ.21: ಸಂಶೋಧನಾ ಸಂಸ್ಥೆಗಳಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ,ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಮತ್ತು ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕನಾಮಿಕ್ ರೀಸರ್ಚ್ ಸಲ್ಲಿಸಿರುವ ಕಪ್ಪುಹಣ ಕುರಿತ ಪ್ರತ್ಯೇಕ ವರದಿಗಳನ್ನು ಬಹಿರಂಗಗೊಳಿಸುವಂತೆ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ವಿತ್ತ ಸಚಿವಾಲಯಕ್ಕೆ ನಿರ್ದೇಶ ನೀಡಿದೆ.

ಸಮಿತಿಯ ಇತ್ತೀಚಿನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಂದಾಯ ಕಾರ್ಯದರ್ಶಿ ಅಜಯ ಭೂಷಣ್ ಪಾಂಡೆ ಮತ್ತು ಸಿಬಿಡಿಟಿಯ ಅಧ್ಯಕ್ಷ ಪ್ರಮೋದಚಂದ್ರ ಮೋದಿ ಅವರು ಉಪಸ್ಥಿತರಿದ್ದ ಸಭೆಯಲ್ಲಿ ಮೂರು ವರದಿಗಳಲ್ಲಿ ಮಾಡಲಾಗಿರುವ ಮೌಲ್ಯಮಾಪನಗಳ ಕುರಿತು ಚರ್ಚಿಸಲಾಗಿತ್ತು ಎಂದು ಮೂಲಗಳು ತಿಳಿಸಿದವು.

ಮೂರೂ ವರದಿಗಳು ವಿಭಿನ್ನ ಅಂಕಿಅಂಶಗಳನ್ನು ಒಳಗೊಂಡಿದ್ದು,ಅವುಗಳನ್ನು ಸಭೆಯಲ್ಲಿ ಮಂಡಿಸಲಾಗಿತ್ತು. ದೇಶದಲ್ಲಿ ಈಗ ಚಲಾವಣೆಯಲ್ಲಿರುವ ಹಣದ ಶೇ.2ರಷ್ಟು ಭಾಗ ಕಪ್ಪುಹಣವಾಗಿರಬಹುದು ಎಂದು ಒಂದು ವರದಿಯು ಹೇಳಿದರೆ,ಭಾರತದಲ್ಲಿರುವ ಕಪ್ಪುಹಣದ ಮೊತ್ತ ಇತರ ಯಾವುದೇ ದೇಶಕ್ಕಿಂತ ಹೆಚ್ಚಿರಬಹುದು ಎಂದು ಇನ್ನೊಂದು ವರದಿಯು ತಿಳಿಸಿದೆ.

ಈ ವಿಷಯದಲ್ಲಿ ಇನ್ನಷ್ಟು ಚರ್ಚೆಗಳು ನಡೆಯುವಂತಾಗಲು ವಿವರವಾದ ವರದಿಯೊಂದನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಸಲ್ಲಿಸಲು ಸ್ಥಾಯಿ ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.

2011ರಲ್ಲಿ ಆಗಿನ ಯುಪಿಎ ಸರಕಾರವು ಕಪ್ಪುಹಣ ಕುರಿತು ಅಧ್ಯಯನಗಳಿಗೆ ಚಾಲನೆ ನೀಡಿದ್ದು,ಮೂರೂ ಸಂಸ್ಥೆಗಳು 2013 ಮತ್ತು 2014ರ ನಡುವೆ ತಮ್ಮ ವರದಿಗಳನ್ನು ಸಲ್ಲಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News