ಪಠಾಣ್ ಕೋಟ್,ಉರಿ ದಾಳಿ ನಡೆದಾಗಲೂ ನಾವು ಕೇವಲ ಎಚ್ಚರಿಕೆಗಳನ್ನು ನೀಡಿದ್ದೇವೆ: ಶಿವಸೇನೆ

Update: 2019-02-21 18:01 GMT

 ಮುಂಬೈ,ಫೆ.21: ಪುಲ್ವಾಮಾ ಭಯೋತ್ಪಾದಕ ದಾಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಗುರುವಾರ ಪ್ರಶ್ನಿಸಿರುವ ಶಿವಸೇನೆಯು,ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ‘ಲೋಕಸಭಾ ಚುನಾವಣೆಯ ಮುನ್ನಾ ದಿನ’ದವರೆಗೂ ಕಾಯದಂತೆ ಸೂಚಿಸಿದೆ.

ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ದಾಳಿಯನ್ನು ಖಂಡಿಸುವುದನ್ನು ನೆಚ್ಚಿಕೊಳ್ಳದಂತೆ ಮೋದಿ ಸರಕಾರಕ್ಕೆ ಸೂಚಿಸಿರುವ ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಲೇಖನವು,ನಾವು ಬೆಂಬಲಕ್ಕಾಗಿ ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳತ್ತ ನೋಡುವ ಬದಲು ನಮ್ಮ ಸ್ವಂತಬಲದಲ್ಲಿ ಹೋರಾಡಬೇಕು ಎಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧವು ಆರಂಭವಾಗಿದೆ ಎಂದಿರುವ ಸೇನೆಯು,ಇದು ಚುನಾವಣಾ ಪ್ರಚಾರದ ಆರಂಭವನ್ನು ಸೂಚಿಸುತ್ತದೆ. ಈ ಸಾಮಾಜಿಕ ಮಾಧ್ಯಮ ಯುದ್ಧವನ್ನು ನಿಲ್ಲಿಸಬೇಕು ಎಂದು ಹೇಳಿದೆ.

ಯೋಧರ ಬಲಿದಾನ ಮತ್ತು ಭಯೋತ್ಪಾದಕ ದಾಳಿಗಳು ಚುನಾವಣೆಗಳನ್ನು ಗೆಲ್ಲಲು ಸಾಧನಗಳಾಗುತ್ತಿವೆ. ಇಂತಹ ದೇಶವು ಶತ್ರುಗಳನ್ನು ಹೇಗೆ ಎದುರಿಸುತ್ತದೆ? ,ಪಾಕಿಸ್ತಾನಕ್ಕೆ ಪಾಠ ಕಲಿಸುವ ಭರ್ಜರಿ ಆಟಾಟೋಪಗಳು ಕೇಳಿ ಬರುತ್ತಿವೆ. ಮೊದಲು ಆ ಕೆಲಸವನ್ನು ಮಾಡಿ ನಂತರ ಮಾತನಾಡಿ. ಪಠಾಣ್ ಕೋಟ್,ಉರಿ ಮತ್ತು ಈಗ ಪುಲ್ವಾಮಾ ದಾಳಿಯ ಬಳಿಕವೂ ನಾವು ಬರೀ ಎಚ್ಚರಿಕೆಗಳನ್ನಷ್ಟೇ ನೀಡುತ್ತಿದ್ದೇವೆ ಎಂದು ಶಿವಸೇನೆಯು ಕುಟುಕಿದೆ.

 ಶ್ರೀಲಂಕಾ ಎಲ್‌ಟಿಟಿಇ ಅನ್ನು ಮಟ್ಟಹಾಕಿದಾಗ, ಅಮೆರಿಕವು ಪಾಕಿಸ್ತಾನದೊಳಗೆ ನುಗ್ಗಿ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಾಗ ವಿಶ್ವವೇ ಆ ದೇಶಗಳನ್ನು ಪ್ರಶಂಸಿಸಿತ್ತು. ಆದರೆ ನಾವೇನೂ ಮಾಡದಿದ್ದರೂ ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ ಎಂದಿರುವ ಅದು,ಭಾರತವು ಕ್ರಮಕ್ಕೆ ಮುಂದಾದರೆ ಪಾಕಿಸ್ತಾನವು ತಿರುಗೇಟು ನೀಡುತ್ತದೆ ಎಂದು ಆ ರಾಷ್ಟ್ರದ ಪ್ರಧಾನಿ ಇಮ್ರಾನ್ ಖಾನ್ ಕೊಚ್ಚಿಕೊಂಡಿದ್ದಾರೆ. ಭಾರತದೊಡನೆ ಸಂಘರ್ಷಕ್ಕಿಳಿದರೆ ಸೋಲುವುದು ಪಾಕಿಸ್ತಾನವೇ ಎಂದು ಅಮೆರಿಕ ಮತ್ತು ಫ್ರಾನ್ಸ್‌ನಂತಹ ದೇಶಗಳು ಅದಕ್ಕೆ ತಿಳಿಹೇಳುವವರೆಗೆ ಈ ರಾಷ್ಟ್ರಗಳನ್ನು ಭಾರತದ ನಿಜವಾದ ಮಿತ್ರರೆಂದು ಪರಿಗಣಿಸುವಂತಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News