ರಾಜೀವ್ ಹತ್ಯೆ ಪ್ರಕರಣದ ದೋಷಿಗಳ ಬಿಡುಗಡೆಗೆ ತಮಿಳುನಾಡು ಸರಕಾರ ಒತ್ತಾಯಿಸಲಿ : ಸ್ಟಾಲಿನ್

Update: 2019-02-21 18:02 GMT

ಚೆನ್ನೈ, ಫೆ.21: ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ 7 ಅಪರಾಧಿಗಳ ಬಿಡುಗಡೆಗೆ ಅವಕಾಶ ನೀಡುವಂತೆ ಒತ್ತಾಯಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಆಗ್ರಹಿಸಿದ್ದಾರೆ.

 1991ರ ಮೇ 21ರಂದು ಶ್ರೀಪೆರಂಬುದೂರ್‌ನಲ್ಲಿ ನಡೆದಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಾಲನ್, ಮುರುಗನ್, ನಳಿನಿ, ಸಂಥಾನ್, ರವಿಚಂದ್ರನ್, ಜಯಕುಮಾರ್ ಮತ್ತು ರಾಬರ್ಟ್ ಪಾಸ್ ಅವರು ಸುಮಾರು 3 ದಶಕಗಳಿಂದ ಜೈಲಿನಲ್ಲಿದ್ದಾರೆ. ಇವರನ್ನು ಬಿಡುಗಡೆಗೊಳಿಸಬೇಕೆಂಬ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿ 2018ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ಗೆ ಕಳುಹಿಸಿತ್ತು ಎಂದು ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಸುಪ್ರೀಂಕೋರ್ಟ್‌ನ ಆದೇಶದಂತೆ ಸರಕಾರ ಕೈಗೊಂಡಿರುವ ನಿರ್ಣಯವನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕು. ಆದರೆ ಸಚಿವ ಸಂಪುಟದ ಶಿಫಾರಸಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ರಾಜ್ಯಪಾಲರು ವೌನವಾಗಿರುವುದು ನೋವುಂಟುಮಾಡಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ರಾಜ್ಯಪಾಲರು ಸಂವಿಧಾನದ 161ನೇ ಅನುಚ್ಛೇದದಡಿ 7 ಅಪರಾಧಿಗಳನ್ನು ಬಿಡುಗಡೆಗೊಳಿಸಬೇಕು ಎಂದವರು ಹೇಳಿದರು. ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಸಂದರ್ಭ ಎಎಐಡಿಎಂಕೆ 7 ಅಪರಾಧಿಗಳ ಬಿಡುಗಡೆ, ಕರ್ನಾಟಕ ಸರಕಾರ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ವಿರೋಧ, ತಮಿಳುನಾಡು ಸರಕಾರಕ್ಕೆ ನೀಟ್ ಪರೀಕ್ಷೆಯಲ್ಲಿ ವಿನಾಯಿತಿ ನೀಡುವುದು ಮುಂತಾದ ಷರತ್ತುಗಳನ್ನು ವಿಧಿಸಿರುವ ಬಗ್ಗೆ ತನಗೆ ಮಾಹಿತಿಯಿಲ್ಲ. ಆದರೆ ಕಡೆಪಕ್ಷ 7 ಅಪರಾಧಿಗಳ ಬಿಡುಗಡೆಗಾದರೂ ಒತ್ತಾಯಿಸಬೇಕಿತ್ತು ಎಂದು ಸ್ಟಾಲಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News