ರಾಷ್ಟ್ರೀಯ ಶಾಲಾ ಕ್ರೀಡಾಕೂಟ: ಉಡುಪಿಯ ಪ್ರಜ್ಞಾಗೆ ಚಿನ್ನ

Update: 2019-02-22 14:41 GMT

ಉಡುಪಿ, ಫೆ.22: ಉಡುಪಿ ಕ್ರೀಡಾ ನಿಲಯದ ಪ್ರಜ್ಞಾ ಕೆ. ಇವರು ಫೆ.12ರವರೆಗೆ ಗುಜರಾತ್ ರಾಜ್ಯದ ನಾಡಿಯಾಡ್‌ನಲ್ಲಿ ನಡೆದ 64ನೇ ರಾಷ್ಟ್ರೀಯ ಸೀನಿಯರ್ ಶಾಲಾ ಕ್ರೀಡಾಕೂಟದ 400ಮೀ. ಹರ್ಡಲ್ಸ್‌ನಲ್ಲಿ 1:02.77ಸೆ. ಸಾಧನೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಅಲ್ಲದೇ 2018ರ ಜುಲೈ ತಿಂಗಳಲ್ಲಿ ಗುಜರಾತ್‌ನ ವಡೋದರದಲ್ಲಿ ನಡೆದ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 400 ಮೀ. ಹರ್ಡಲ್ಸ್ ನಲ್ಲೂ 1:05.00ಸೆ. ಸಾಧನೆಯೊಡನೆ ಬೆಳ್ಳಿ ಪದಕವನ್ನು ಜಯಿಸಿದ್ದರು. ಕಳೆದ ಸೆಪ್ಟಂಬರ್‌ನಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 400ಮೀ ಹರ್ಡಲ್ಸ್‌ನಲ್ಲಿ ಇವರು 1:02.99ಸೆ. ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು.

ಪ್ರಜ್ಞಾ ಅವರು ಇದೇ ವರ್ಷದ ಜ.10ರಿಂದ 13ರವರೆಗೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ನ 400ಮೀ. ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿ 1:05.8ಸೆ. ಸಾಧನೆಯಲ್ಲಿ ಆರನೇ ಸ್ಥಾನ ಪಡೆದಿದ್ದರು.

ಜಿಲ್ಲೆಯ ಉದಯೋನ್ಮುಖ ಪ್ರತಿಭೆಯಾಗಿರುವ ಪ್ರಜ್ಞಾ ಇವರು ಜಿಲ್ಲಾ ಅಥ್ಲೆಟಿಕ್ ತರಬೇತುದಾರರಾದ ಅನಂತ್‌ರಾಮ್ ಕೆ. ಇವರ ಮಾರ್ಗದರ್ಶನ ದಲ್ಲಿ ತರಬೇತಿಯನ್ನು ಪಡೆಯುತಿದ್ದಾರೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News