ಫೆ.25ಕ್ಕೆ ಕಾಂಗ್ರೆಸ್‌ನಿಂದ ಉಡುಪಿಯಲ್ಲಿ ‘ಗಾಂಧಿಯಾನ’

Update: 2019-02-22 15:32 GMT

ಉಡುಪಿ, ಫೆ.22: ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾಗಿರುವ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲಾ ಘಟಕ ‘ಗಾಂಧಿ 150’ ಎಂಬ ನಾಮಧ್ಯೇಯದಡಿ ಪಕ್ಷ ಸಂಘಟನೆಗೆ ಪೂರಕವಾದ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಇದರ ಅಂಗವಾಗಿ ಇದೇ ಫೆ.25ರ ಸೋಮವಾರ ಅಪರಾಹ್ನ 3:00ರಿಂದ ಉದ್ಯಾವರ ಬೊಳ್ಜೆ ಕಡವಿನ ಬಾಗಿಲಿನಿಂದ ಕಿನ್ನಿಮುಲ್ಕಿಯವರೆಗೆ ‘ಗಾಂಧಿ ಯಾನ’ ಎಂಬ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಆರ್‌ಜಿಪಿಆರ್‌ಎಸ್‌ನ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ತಿಳಿಸಿದ್ದಾರೆ.

ಭಾರತ ಸ್ವಾತಂತ್ರ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ವೇಳೆಯಲ್ಲಿ ಮಹಾತ್ಮ ಗಾಂಧೀಜಿ ಅವರು ದೇಶದ ಜನತೆಯಲ್ಲಿ ಜನಜಾಗೃತಿಯನ್ನು ಮೂಡಿಸಲು ಹಾಗೂ ಅಸ್ಪಶ್ಯತಾ ನಿವಾರಣೆಗಾಗಿ ದೇಶಸಂಚಾರ ಮಾಡುತ್ತಾ 1934ರ ಫೆ.25ರಂದು ಉಡುಪಿಗೂ ಆಗಮಿಸಿದ್ದರು. ಆಗ ಅವರು ಕಟಪಾಡಿಯಿಂದ ಉದ್ಯಾವರ ಹೊಳೆಯನ್ನು ದೋಣಿಯ ಜಂಗಲ್ ಮೂಲಕ ದಾಟಿ ಅಜ್ಜರಕಾಡಿಗೆ ಬಂದು ಜನತೆಯನ್ನು ಉದ್ದೇಶಿಸಿ ಭಾಷಣವನ್ನು ಮಾಡಿದ್ದರು. ಈ ಐತಿಹಾಸಿಕ ಘಟನೆಯ ಸವಿ ನೆನಪಿಗಾಗಿ ಹಾಗೂ ಗಾಂಧಿ ಚಿಂತನೆಯನ್ನು ಬಿತ್ತಲು ಮತುತಿ ಅಹಿಂಸೆ ಹಾಗೂ ಸೌಹಾರ್ದತೆಯ ಬದುಕನ್ನು ಪ್ರತಿಪಾದಿಸಲು ಸಂಘಟನೆ ಗಾಂಧಿಯಾನ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

ಈ ಪಾದಯಾತ್ರೆ ಸೋಮವಾರ ಅಪರಾಹ್ನ 3:00ಕ್ಕೆ ಉದ್ಯಾವರ ಬೊಳ್ಜೆ ಕಡವಿನ ಬಾಗಿಲಿನಿಂದ ಪ್ರಾರಂಭಗೊಂಡು ಮಠದಂಗಡಿ- ಬಲಾಯಿಪಾದೆ- ಕಿನ್ನಿಮುಲ್ಕಿ ಹಳೆ ರಸ್ತೆಗಾಗಿ ಸಾಗಿ ಅಜ್ಜರಕಾಡು ಗಾಂಧಿ ಪ್ರತಿಮೆಯ ಬಳಿ ಸಮಾಪನಗೊಳ್ಳಲಿದೆ. ಅಲ್ಲಿ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಪ್ರೊ.ಪ್ರಸಾದ್ ರಾವ್ ಎಂ. ಗಾಂಧಿ ಚಿಂತನೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದವರು ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ, ಆರ್‌ಜಿಪಿಆರ್‌ಎಸ್ ರಾಜ್ಯ ಸಂಯೋಜಕ ರಂಗಸ್ವಾಮಿ, ಉಡುಪಿ ಜಿಲ್ಲಾ ಉಸ್ತುವಾರಿ ಜಿ.ಎ. ಬಾವಾ, ಮಾಜಿ ಶಾಸಕರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ ಅಲ್ಲದೇ ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರೋಶನಿ ಒಲಿವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News