ವಿಜಯಬ್ಯಾಂಕ್ ಉಳಿಸಿ-ವಿಲೀನಿಕರಣ ನಿಲ್ಲಿಸಿ: ಸಿಪಿಎಂನಿಂದ ಶಾಖೆಗಳ ಎದುರು ಪ್ರತಿಭಟನೆ
Update: 2019-02-22 21:04 IST
ಉಡುಪಿ, ಫೆ.22: ಅವಿಭಜಿತ ದ.ಕ. ಜಿಲ್ಲೆಯ ಹೆಮ್ಮೆಯ ಹಾಗೂ ನಿರಂತರ ಲಾಭಗಳಿಸುತ್ತಿರುವ ವಿಜಯ ಬ್ಯಾಂಕ್‌ನ್ನು ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಪ್ ಬರೋಡದೊಂದಿಗೆ ವಿಲೀನಗೊಳಿಸುತ್ತಿರುವುದನ್ನು ವಿರೋಧಿಸಿ ನಾಳೆಯಿಂದ ಜಿಲ್ಲೆಯಾದ್ಯಂತ ವಿಜಯ ಬ್ಯಾಂಕ್ ಶಾಖೆಗಳ ಎದುರು ಪ್ರತಿಭಟನೆ ನಡೆಸಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಕರೆ ನೀಡಿದೆ.
ಫೆ.23ರಂದು ಮಂಗಳೂರಿನಲ್ಲಿ ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಸಿಪಿಎಂಗೆ ಸೇರಿದ ಗ್ರಾಪಂ ಸದಸ್ಯರು ಭಾಗವಹಿಸಿ ವಿಲೀನಿಕರಣ ತೀರ್ಮಾನವನ್ನು ಕೈಬಿಡಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.