ಪುಲ್ವಾಮ ದಾಳಿ ಹೀನ ಮತ್ತು ಹೇಡಿ ಕೃತ್ಯ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಂಡನೆ

Update: 2019-02-22 17:14 GMT

ವಿಶ್ವಸಂಸ್ಥೆ,ಫೆ.22: ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ)ಯು,ಭೀತಿವಾದದ ಪ್ರಾಯೋಜಕರನ್ನು ಉತ್ತರದಾಯಿಗಳಾಗಿಸಲು ಕರೆ ನೀಡಿದೆ. ವಿಶ್ವಸಂಸ್ಥೆಯ ನಿಯೋಜಿತ ಭಯೋತ್ಪಾದಕರ ಪಟ್ಟಿಯಲ್ಲಿ ಜೈಶೆ ಮುಹಮ್ಮದ್‌ನ ಸ್ಥಾಪಕ ಮಸೂದ್ ಅಝರ್‌ನನ್ನು ಸೇರ್ಪಡೆಗೊಳಿಸಲು ಫ್ರಾನ್ಸ್ ಮಂಡಿಸಲಿರುವ ನಿರ್ಣಯಕ್ಕಾಗಿ ಕಾಯುವಿಕೆಯ ನಡುವೆಯೇ ಯುಎನ್‌ಎಸ್‌ಸಿಯ ಈ ಖಂಡನೆ ಹೊರಬಿದ್ದಿದೆ.

2019,ಫೆ.14ರಂದು ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ,ಜೈಶೆ ಮುಹಮ್ಮದ್ ಹೊಣೆಗಾರಿಕೆಯನ್ನು ಒಪ್ಪಿಕೊಂಡಿರುವ, ಭಾರತೀಯ ಅರೆಸೇನಾ ಪಡೆಗಳ 40ಕ್ಕೂ ಅಧಿಕ ಸಿಬ್ಬಂದಿ ಸಾವನ್ನಪ್ಪಲು ಮತ್ತು ಹಲವಾರು ಜನರು ಗಾಯಗೊಳ್ಳಲು ಕಾರಣವಾದ ಹೀನ ಮತ್ತು ಹೇಡಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಿವೆ ಎಂದು ಯುಎನ್‌ಎಸ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

ಯುಎನ್‌ಎಸ್‌ಸಿ ನಿರ್ಣಯವನ್ನು ಚೀನಾ ಸೇರಿದಂತೆ ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ ಅಂಗೀಕರಿಸಿವೆ. ಜೈಶೆ ಮುಹಮ್ಮದ್‌ನ್ನು ಹೆಸರಿಸುವುದು ಮತ್ತು ಪುಲ್ವಾಮ ದಾಳಿಯ ರೂವಾರಿಗಳನ್ನು ಕಾನೂನಿನ ಶಿಕ್ಷೆಗೊಳಪಡಿಸುವುದು ಸೇರಿದಂತೆ ಭಾರತವು ತನ್ನ ಪಾಲುದಾರ ರಾಷ್ಟ್ರಗಳ ಮೂಲಕ ಸಲ್ಲಿಸಿದ್ದ ಪ್ರಸ್ತಾವವನ್ನು ನಿರ್ಣಯವು ಒಳಗೊಂಡಿದೆ. ವಿಶ್ವಸಂಸ್ಥೆಯು 2002ರಿಂದ ಜೈಶೆ ಮುಹಮ್ಮದ್‌ನ್ನು ಭಯೋತ್ಪಾದಕ ಗುಂಪು ಎಂದು ನಿಷೇಧಿಸಿದೆ.

ಈ ಖಂಡನೀಯ ಭಯೋತ್ಪಾದಕ ಕೃತ್ಯಗಳ ರೂವಾರಿಗಳು,ಸಂಘಟಕರು,ಆರ್ಥಿಕ ನೆರವು ಪೂರೈಕೆದಾರರು ಮತ್ತು ಪ್ರಾಯೋಜಕರನ್ನು ಹೊಣೆಯಾಗಿಸುವ ಮತ್ತು ಅವರನ್ನು ಕಾನೂನಿನ ಶಿಕ್ಷೆಗೆ ಗುರಿಪಡಿಸುವ ಅಗತ್ಯಕ್ಕೆ ಮಂಡಳಿಯ ಸದಸ್ಯ ರಾಷ್ಟ್ರಗಳು ಒತ್ತು ನೀಡಿವೆ ಮತ್ತು ಅಂತರ್ ರಾಷ್ಟ್ರೀಯ ಕಾನೂನು ಹಾಗೂ ಸುಸಂಗತ ಭದ್ರತಾ ಮಂಡಳಿಯ ನಿರ್ಣಯಗಳಡಿ ತಮ್ಮ ಬಾಧ್ಯತೆಗಳಿಗೆ ಅನುಗುಣವಾಗಿ ಭಾರತ ಸರಕಾರ ಮತ್ತು ಇತರ ಸುಸಂಗತ ಪ್ರಾಧಿಕಾರಗಳೊಂದಿಗೆ ಸಹಕರಿಸುವಂತೆ ಎಲ್ಲ ರಾಷ್ಟ್ರಗಳನ್ನು ಆಗ್ರಹಿಸಿವೆ ಎಂದು ಯುಎನ್‌ಎಸ್‌ಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಯೋತ್ಪಾದಕ ಕೃತ್ಯಗಳ ಹಿಂದಿನ ಪ್ರೇರಣೆ,ಎಲ್ಲಿ,ಯಾವಾಗ ಮತ್ತು ಯಾರು ನಡೆಸಿದರು ಎನ್ನುವುದನ್ನು ಪರಿಗಣಿಸದೆ ಭೀತಿವಾದದ ಯಾವುದೇ ಕೃತ್ಯಗಳು ಅಪರಾಧಿಕ ಸ್ವರೂಪದ್ದಾಗಿವೆ ಮತ್ತು ಸಮರ್ಥನೀಯವಲ್ಲ ಎನ್ನುವುದನ್ನು ಮಂಡಳಿಯು ಪುನರುಚ್ಚರಿಸುತ್ತದೆ ಎಂದೂ ಅದು ಹೇಳಿದೆ.

ವಿಶ್ವಸಂಸ್ಥೆಯ ಇಂತಹ ಯಾವುದೇ ಪ್ರಯತ್ನವನ್ನು ವಿಫಲಗೊಳಿಸುವ ಪಾಕಿಸ್ತಾನದ ಪ್ರಯತ್ನಗಳ ಹೊರತಾಗಿಯೂ ಯುಎನ್‌ಎಸ್‌ಸಿಯ ನಿರ್ಣಯ ಹೊರಬಿದ್ದಿದೆ.

ಭಾರತದಿಂದ ಪ್ರತೀಕಾರ ಕ್ರಮದ ನಿರೀಕ್ಷೆಯಿರುವುದರಿಂದ ಮಧ್ಯಪ್ರವೇಶಿಸುವಂತೆ ಕೋರಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಷಿ ಅವರು ಸೋಮವಾರ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು.

ಯುಎನ್‌ಎಸ್‌ಸಿ ಹೇಳಿಕೆಯಲ್ಲಿ ಜೈಶ್ ಉಲ್ಲೇಖ ತೀರ್ಪಲ್ಲ: ಚೀನಾ

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಜೈಶೆ ಮುಹಮ್ಮದ್‌ನ್ನು ಹೆಸರಿಸಿ ಯುಎನ್‌ಎಸ್‌ಸಿ ಹೊರಡಿಸಿರುವ ಕಟುವಾದ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲು ಬಯಸಿರುವ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ, ಜೈಶ್ ಅನ್ನು ಸಾಮಾನ್ಯ ಶಬ್ದಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅದು ತೀರ್ಪನ್ನು ಪ್ರತಿನಿಧಿಸುವುದಿಲ್ಲ ಎಂದು ಶುಕ್ರವಾರ ಹೇಳಿದೆ.

ಪುಲ್ವಾಮಾ ದಾಳಿಯಲ್ಲಿ ಜೈಶೆ ಮುಹಮ್ಮದ್‌ನ ಪಾತ್ರವನ್ನು ಪ್ರಮುಖವಾಗಿ ಬಿಂಬಿಸಿರುವ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶ್ವಾಂಗ್ ಅವರು,ಭಯೋತ್ಪಾದಕ ಘಟನೆಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಚೀನಾ ಸರಕಾರವು ನಿಕಟವಾಗಿ ಗಮನಿಸುತ್ತಿದೆ. ಗುರುವಾರ ಯುಎನ್‌ಎಸ್‌ಸಿಯ ಹೇಳಿಕೆಯಲ್ಲಿ ನಿರ್ದಿಷ್ಟ ಸಂಘಟನೆಯನ್ನು ಉಲ್ಲೇಖಿಸಲು ಸಾಮಾನ್ಯ ಶಬ್ದಗಳನ್ನು ಬಳಸಲಾಗಿದೆ. ಅದು ದಾಳಿಯ ಕುರಿತು ತೀರ್ಪನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದರು.

 ಅವರ ಈ ಹೇಳಿಕೆಯು ಮಿತ್ರರಾಷ್ಟ್ರ ಪಾಕಿಸ್ತಾನವನ್ನು ಸಾಂತ್ವನಗೊಳಿಸುವ ಪ್ರಯತ್ನವೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News