“ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವ ಸಮಯ”

Update: 2019-02-22 16:11 GMT

ಸಿಯೋಲ್ (ದಕ್ಷಿಣ ಕೊರಿಯ), ಫೆ. 22: ಗಡಿಯಾಚೆಯ ಭಯೋತ್ಪಾದನೆ ವಿರುದ್ಧ ಕೆಂಡ ಕಾರಿದ ಪ್ರಧಾನಿ ನರೇಂದ್ರ ಮೋದಿ, ಮಾನವೀಯತೆಯಲ್ಲಿ ನಂಬಿಕೆಯಿರುವ ಎಲ್ಲರೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಶಾಂತಿಯುತ ಅಭಿವೃದ್ಧಿಗೆ ಭಾರತ ನಡೆಸಿರುವ ಪ್ರಯತ್ನಗಳು ಗಡಿಯಾಚೆಯ ಭಯೋತ್ಪಾದನೆಯಿಂದ ವಿಫಲವಾಗಿವೆ ಎಂದು ಅವರು ನುಡಿದರು.

ಅವರು ದಕ್ಷಿಣ ಕೊರಿಯ ರಾಜಧಾನಿ ಸಿಯೋಲ್‌ನಲ್ಲಿ ‘ಸಿಯೋಲ್ ಶಾಂತಿ ಪ್ರಶಸ್ತಿ’ ಸ್ವೀಕರಿಸಿದ ಬಳಿಕ ಮಾತನಾಡುತ್ತಿದ್ದರು.

  ‘‘ಭಾರತವು 40 ವರ್ಷಗಳಿಂದಲೂ ಗಡಿಯಾಚೆಯ ಭಯೋತ್ಪಾದನೆಯ ಬಲಿಪಶುವಾಗಿದೆಯಾದರೂ, ಇಂದು ಎಲ್ಲ ದೇಶಗಳು ಈ ಪಿಡುಗನ್ನು ಎದುರಿಸುತ್ತಿವೆ. ಭಯೋತ್ಪಾದಕರ ಜಾಲಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು, ಅವರ ಹಣಕಾಸು ಪೂರೈಕೆ ಮಾರ್ಗಗಳನ್ನು ಮುಚ್ಚಲು ಹಾಗೂ ಭಯೋತ್ಪಾದಕ ಸಿದ್ಧಾಂತ ಮತ್ತು ಪ್ರಚಾರವನ್ನು ನಿಲ್ಲಿಸಲು ಮಾನವೀಯತೆಯಲ್ಲಿ ನಂಬಿಕೆಯಿರುವವರೆಲ್ಲರೂ ಕೈಜೋಡಿಸುವ ಕಾಲ ಬಂದಿದೆ’’ ಎಂದು ಪ್ರಧಾನಿ ಮೋದಿ ಹೇಳಿದರು.

ಭಯೋತ್ಪಾದನೆಯ ಅಂತ್ಯಕ್ಕೆ ಕರೆ ನೀಡಿದ ಅವರು, ‘‘ಹೀಗೆ ಮಾಡಿದರೆ ಮಾತ್ರ ನಾವು ದ್ವೇಷದ ಸ್ಥಾನದಲ್ಲಿ ಸೌಹಾರ್ದವನ್ನು ಹಾಗೂ ವಿನಾಶದ ಸ್ಥಳದಲ್ಲಿ ಅಭಿವೃದ್ಧಿಯನ್ನು ತರಬಹುದು ಹಾಗೂ ಹಿಂಸೆ ಮತ್ತು ಸೇಡಿನ ನೆಲವನ್ನು ಶಾಂತಿಯ ಪೋಸ್ಟ್‌ಕಾರ್ಡ್ ಆಗಿ ಪರಿವರ್ತಿಸಬಹುದು’’ ಎಂದರು.

ಪ್ರಶಸ್ತಿ ಹಣ ‘ನಮಾಮಿ ಗಂಗೆ’ಗೆ

ಪ್ರಶಸ್ತಿಯ ನಗದು ಹಣ 2,00,000 ಡಾಲರ್ (ಸುಮಾರು 1.42 ಕೋಟಿ ರೂಪಾಯಿ)ನ್ನು ‘ನಮಾಮಿ ಗಂಗೆ’ ಯೋಜನೆಗೆ ದೇಣಿಗೆ ನೀಡುವುದಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

‘ನಮಾಮಿ ಗಂಗೆ’ ಗಂಗಾ ನದಿಯನ್ನು ಶುದ್ಧೀಕರಿಸುವ ಕೇಂದ್ರ ಸರಕಾರದ ಯೋಜನೆಯಾಗಿದೆ.

 ಗಂಗೆ ಕೇವಲ ನದಿಯಲ್ಲ, ಭಾರತದ ಎಲ್ಲ ಜನರು ಅದನ್ನು ಪವಿತ್ರ ಭಾವನೆಯಿಂದ ನೋಡುತ್ತಾರೆ ಹಾಗೂ ಅದು ಭಾರತದ ಲಕ್ಷಾಂತರ ಜನರ ಆರ್ಥಿಕ ಜೀವನಾಡಿಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News