ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಮ್‌ಗೆ ಸಮನ್ಸ್ ಜಾರಿ ಮಾಡಿದ ಸಂಸದೀಯ ಸಮಿತಿ

Update: 2019-02-22 16:29 GMT

ಹೊಸದಿಲ್ಲಿ,ಫೆ.22: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಅದರ ಅಂಗವಾಗಿರುವ ವಾಟ್ಸ್‌ಆ್ಯಪ್ ಹಾಗೂ ಇನ್ಸ್ಟಾಗ್ರಾಮ್ ಪ್ರತಿನಿಧಿಗಳಿಗೆ ಸಮನ್ಸ್ ಜಾರಿ ಮಾಡಿರುವ ಸಂಸದೀಯ ಸಮಿತಿ ಮುಂದಿನ ತಿಂಗಳು ತನ್ನ ಮುಂದೆ ಹಾಜರಾಗುವಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಚರ್ಚೆ ನಡೆಸುವಂತೆ ಸೂಚಿಸಿದೆ. ಈ ಹಿಂದೆ ಸಂಸದೀಯ ಸಮಿತಿ ಟ್ವಿಟರ್‌ಗೂ ಸಮನ್ಸ್ ಜಾರಿ ಮಾಡಿತ್ತು. ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಹರಡಲು ಅತ್ಯಂತ ಪ್ರಶಸ್ತ ತಾಣವಾಗಿದ್ದು ಕೆಲವೇ ತಿಂಗಳ ನಂತರ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ವ್ಯಾಪಕ ಪರಿಶೀಲನೆಗೆ ಒಳಗಾಗುವ ಸಾಧ್ಯತೆಯಿದೆ. ಗುರುವಾರ ಸಂಜೆ ನಡೆದ ಮಾಹಿತಿ ತಂತ್ರಜ್ಞಾನಗಳ ಸಂಸದೀಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿಯ ಅನುರಾಗ್ ಠಾಕೂರ್, ಈ ಕುರಿತು ಫೇಸ್‌ಬುಕ್ ಮತ್ತು ಅದರ ವಿಭಾಗಗಳ ಅಧಿಕಾರಿಗಳ ನಿಲುವಿನ ಬಗ್ಗೆ ಮಾರ್ಚ್ 6ರಂದು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಮನ್ಸ್ ಜಾರಿ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಫೇಸ್‌ಬುಕ್ ನಿರಾಕರಿಸಿದ್ದರೆ ವಾಟ್ಸ್‌ಆ್ಯಪ್ ಮತ್ತು ಇನ್ಸ್ಟಾಗ್ರಾಮ್ ತತ್‌ಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಸಂಸದೀಯ ಸಮಿತಿಯು ಈ ಹಿಂದೆ ಟ್ವಿಟರ್‌ನ ಮುಖ್ಯ ಕಾರ್ಯವಾಹಕ ಜ್ಯಾಕ್ ಡೋರ್ಸಿಗೆ ಸಮನ್ಸ್ ಜಾರಿ ಮಾಡಿದ್ದು ಸೋಮವಾರ ಹಾಜರಾಗುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News