ದೇಶದ ಒಳಗೆ ಧರ್ಮ, ಜಾತಿಗಳ ಹೆಸರಲ್ಲಿ ಕಿತ್ತಾಟ ನಡೆಸುವುದು ನಿಲ್ಲಬೇಕು: ಕರ್ನಲ್ ರಾಜಮನ್ನಾರ್
ಮಂಗಳೂರು, ಫೆ.22: ದೇಶದ ಗಡಿಗಳಲ್ಲಿ ಸೈನಿಕರು ಹವಾಮಾನದ ವೈಪರೀತ್ಯದ ಜತೆಗೆ ವೈರಿಗಳೊಂದಿಗೆ ಹೋರಾಡುತ್ತಾ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಆದರೆ ದೇಶದ ಒಳಗೆ ಧರ್ಮ, ಜಾತಿಗಳ ಹೆಸರಲ್ಲಿ ಒಡಕು ಮೂಡಿಸುತ್ತಾ ಕಿತ್ತಾಟ ನಡೆಸುವುದು ಸಲ್ಲದು ಎಂದು ಕರ್ನಲ್ ಎಂ.ಎ. ರಾಜಮನ್ನಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಪುರಭವನದಲ್ಲಿ ಬಿ-ಹ್ಯೂಮನ್ ಹಾಗೂ ಹಿದಾಯ ಫೌಂಡೇಶನ್‌ಗಳ ಸಹಯೋಗದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪುಲ್ವಾಮದಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಮಂಗಳೂರು ಜಾತಿ, ಧರ್ಮಗಳ ಹೆಸರಲ್ಲಿ ಜಗಳ, ಮನಸ್ಥಾಪಗಳು ಹೆಚ್ಚುತ್ತಿದ್ದು, ಎಲ್ಲ ವರ್ಗಗಳ ಜನರೂ ಒಗ್ಗೂಡಬೇಕು ಎಂದು ಅವರು ಮನವಿ ಮಾಡಿದರು.
ಕೇರಳದಲ್ಲಿ ಭೀಕರ ಪ್ರವಾಹ ಉಂಟಾದಾಗ ಇಡೀ ದೇಶವೇ ಮರುಗಿತ್ತು. ಸಂತ್ರಸ್ತ ಕೇರಳಿಗರಿಗೆ ಮದರಸಾ, ಮಸೀದಿಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ಯಾವುದೇ ಜಾತಿ ನೋಡದೇ ಆಹಾರ ವಿತರಿಸಲಾಯಿತು. ದೇಶದ ಸಂಕಷ್ಟದ ವಿಷಯ ಬಂದಾಗ ಎಲ್ಲ ಸಮುದಾಯದವರೂ ಒಗ್ಗೂಡಿ ಸಹಾಯ, ಸಹಕಾರ ನೀಡಿದ್ದರು. ಅದರಂತೆ ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ದೇಶಾದ್ಯಂತ ಸಹಾಯ ಹಸ್ತದ ಹೊಳೆಯೇ ಹರಿದಿದೆ. ಈ ಸಹಾಯವೇ ಸೈನಿಕರಿಗೆ ಮನಸ್ಥೈರ್ಯವನ್ನು ತುಂಬುತ್ತದೆ ಎಂದರು.
ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಮಾತನಾಡಿ, ದೇಶದ ವಿಷಯ ಬಂದಾಗ ಎಲ್ಲ ಸಮುದಾಯಗಳ ಜನರು ಒಗ್ಗೂಡಿ ಸೈನಿಕರಿಗೆ ಹುಮ್ಮಸ್ಸು ತುಂಬಬೇಕು. ಇಂತಹ ಸಂದರ್ಭ ವೈರಿಗಳ ವಿರುದ್ಧ ಎಲ್ಲರೂ ಒಗ್ಗೂಡಬೇಕು. ಮಂಗಳೂರು ಸುಂದರ ನಗರವಾಗಿದೆ. ಪ್ರತಿದಿನ ಹಿಂದೂ-ಮುಸ್ಲಿಮರು ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತಾರೆ. ಎಲ್ಲರೂ ಸೌಹಾರ್ದದಿಂದ ಬಾಳಬೇಕು ಎಂದರು.
ಸಮಾರಂಭದಲ್ಲಿ ಕೇಮಾರು ಮಠದ ಈಶ ವಿಠ್ಠಲದಾಸ ಸ್ವಾಮೀಜಿ, ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞಿ, ಹಿದಾಯ ಫೌಂಡೇಶನ್‌ನ ಮನ್ಸೂರ್ ಅಹ್ಮದ್, ಮುಹಮ್ಮದ್ ಹನೀಫ್ ಜಿ., ವಿಶ್ವಾಸ್ ಬಾವ ಬಿಲ್ಡರ್ಸ್‌ನ ಅಬ್ದುಲ್ ರವೂಫ್ ಪುತ್ತಿಗೆ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗ್ಡೆ, ಬಿ-ಹ್ಯೂಮನ್ ಸ್ಥಾಪಕ ಆಸಿಫ್ ಡೀಲ್ಸ್, ಎಸ್.ಬಿ. ದಾರಿಮಿ, ಎಂ.ಎಸ್. ಹಿದಾಯತ್ ಅಡ್ಡೂರು, ಸಂತ ತೆರೆಸಾ ಶಾಲೆಯ ಐನುಲ್ ಮರಿಯಮ್, ಮುಕೇಶ್, ಗಾಯಕ ಮುಹಮ್ಮದ್ ಹನೀಫ್, ಉಮರ್ ಯು.ಎಚ್. ಮತ್ತಿತರರು ಉಪಸ್ಥಿತರಿದ್ದರು.