ಬಪ್ಪಳಿಗೆ: ಮಯ್ಯತ್ ಪರಿಪಾಲನಾ ಕಟ್ಟಡ ಲೋಕಾರ್ಪಣೆ

Update: 2019-02-22 16:43 GMT

ಪುತ್ತೂರು, ಫೆ. 22: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಬಪ್ಪಳಿಗೆ ಇದರ ವತಿಯಿಂದ ಬಪ್ಪಳಿಗೆ ಮಸೀದಿ ವಠಾರದಲ್ಲಿ ನೂತನವಾಗಿ ನಿರ್ಮಿಸಲಾದ ಮಯ್ಯತ್ ಪರಿಪಾಲನಾ ಕಟ್ಟಡವನ್ನು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಶುಕ್ರವಾರ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರ್ಮಿಕ ವಿಚಾರಗಳಲ್ಲಿ ಬಪ್ಪಳಿಗೆ ಮುಂಚೂಣಿಯಲ್ಲಿದ್ದು ಅಪಘಾತ ಮತ್ತು ಇನ್ನಿತರ ಅವಘಡಗಳ ಕಾರಣಗಳಿಂದ ಆಸ್ಪತ್ರೆಗಳಲ್ಲಿ ಮೃತ ಪಟ್ಟವರ ಮೃತ ದೇಹಗಳನ್ನು ಉಚಿತವಾಗಿ ಮಯ್ಯತ್ ಪರಿಪಾಲನೆ ಮೂಲಕ ಇಲ್ಲಿನ ಯುವಕರು ಮಾದರಿಯಾಗಿದ್ದಾರೆ ಎಂದು ಹೇಳಿದರು. ಮೃತದೇಹಗಳಿಗೆ ಅಂತಿಮ ವಿಧಿ ವಿಧಾನ ನೆರವೇರಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರನ್ನು ಸೇರಿಸಿಕೊಂಡು ಮೊತ್ತ ಸಂಗ್ರಹಿಸಿ ನೂತನ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಸದಸ್ಯ ಹಸನ್ ಹಾಜಿ ಯುನಿಟಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ನಗರಸಭಾ ಮಾಜಿ ಸದಸ್ಯ ಎಚ್ ಮಹಮ್ಮದ್ ಆಲಿ, ಬಪ್ಪಳಿಗೆ ಜುಮಾ ಮಸೀದಿ ಅಧ್ಯಕ್ಷ ದಾವೂದ್ ಡಿ.ಎ, ಬಪ್ಪಳಿಗೆ ಮಸೀದಿ ಮಾಜಿ ಖತೀಬ್ ಸಿರಾಜುದ್ದೀನ್ ಫೈಝಿ, ಕಲ್ಲೇಗ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಪುತ್ತೂರು ಜಮಾಅತ್ ಕಮಿಟಿ ಸದಸ್ಯ ವಿ.ಕೆ ಶರೀಫ್ ಬಪ್ಪಳಿಗೆ, ದರ್ಬೆ ಮಸೀದಿ ಇಮಾಮ್ ಹಮೀದ್ ಹನೀಫಿ, ಪುತ್ತೂರು ಜಮಾಅತ್ ಕಮಿಟಿ ಪ್ರ.ಕಾರ್ಯದರ್ಶಿ ಯಾಕೂಬ್ ಖಾನ್, ಬಲ್ನಾಡು ಮಸೀದಿ ಖತೀಬ್ ನಿಯಾಝ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.

ಮೂವರಿಗೆ ಸನ್ಮಾನ

ಈ ಸಂದರ್ಭದಲ್ಲಿ ಸ್ಥಳೀಯ ಸಹಕಾರಿಗಳಾದ ಅಬ್ದುಲ್ ಅಝೀಝ್ ಬಪ್ಪಳಿಗೆ, ಫಝಲ್ ಹಾಜಿ ಮತ್ತು ಸಿರಾಜುದ್ದೀನ್ ಅವರನ್ನು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಸನ್ಮಾನಿಸಿ ಗೌರವಿಸಿದರು.

ಮಾದರಿ ಸೇವೆ ಮಾಡುತ್ತಿರುವ ತಂಡ

ಪುತ್ತೂರು ನಗರದ ಸಮೀಪದಲ್ಲಿರುವ ಬಪ್ಪಳಿಗೆ ಮಸೀದಿಯ ಜಮಾಅತ್ ಕಮಿಟಿಯ ಅನ್ಸಾರುಲ್ ಇಸ್ಲಾಂ ಯುವಕರ ಸಮಿತಿ  ತಂಡವು ಅಪಘಾತ ಮತ್ತಿತರ ಅವಘಡಗಳಲ್ಲಿ ಮೃತಪಟ್ಟ ಮೃತದೇಹವನ್ನು ಬಪ್ಪಳಿಗೆಯಲ್ಲಿ ಉಚಿತವಾಗಿ ಸ್ಥಾನ ಸೇರಿದಂತೆ ಅಂತಿಮ ವಿಧಿ ವಿಧಾನ ನೆರವೇರಿಸುವ ಸೇವೆ ನೀಡುತ್ತಿದೆ. ಮಸೀದಿಯ ಅಧೀನದಲ್ಲಿರುವ "ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ' ಎಂಬ ಯುವಕರ ತಂಡ ಅನೇಕ ವರ್ಷಗಳಿಂದ ಉಚಿತವಾಗಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸುತ್ತಾ ಬಂದಿದೆ. ಇಲ್ಲಿನ ಯುವಕರ ಜೊತೆ ಜಮಾಅತಿನ ಹಿರಿಯರು ಪೂರ್ಣ ಸಹಕಾರ ನೀಡುತ್ತಿದ್ದು ಮಯ್ಯತ್ ಪರಿಪಾಲನೆ ಎಂಬ ಮಾದರಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಮೃತ ವ್ಯಕ್ತಿ ಯಾವ ಊರಿನವನಾದರೂ ಮಯ್ಯತ್ ಪರಿಪಾಲನೆ ನಡೆಸಲಾಗುತ್ತಿದೆ. ರಾತ್ರಿ ಹಗಲೆನ್ನದೇ ಯಾವ ಸಂದರ್ಭದಲ್ಲಿ ಘಟನೆ ಸಂಭವಿಸಿ ಮೃತದೇಹ ಬಂದರೂ ಇಲ್ಲಿನ ಯುವಕರು ಪರಿಪಾಲನೆ ಕಾಯಕ ನಡೆಸುತ್ತಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಂದಿರುವ ಹಾಗೂ ಇತರರ ಸೇರಿದಂತೆ ಕಳೆದ 13 ವರ್ಷಗಳ ಅವಧಿಯಲ್ಲಿ ನೂರಾರು ಮಯ್ಯತ್‍ಗಳ ಪರಿಪಾಲನೆ ಇಲ್ಲಿ ನಡೆದಿದೆ. ಇಲ್ಲಿನ ಯುವಕರಿಗೆ ಮಯ್ಯಿತ್ ಪರಿಪಾಲನೆಯ ಕರಿತು ತರಬೇತಿ ನೀಡಲಾಗಿದೆ.

ಮೃತದೇಹ ಮಹಿಳೆಯದ್ದಾಗಿದ್ದರೆ ಅದನ್ನು ಮಯ್ಯತ್ ಪರಿಪಾಲನೆಯಲ್ಲಿ ಪರಿಣತಿಯನ್ನು ಪಡೆದ ಮಹಿಳೆಯರೇ ನೆರವೇರಿಸುತ್ತಾರೆ. ಹಲವು ಮಹಿಳಾ ಮೃತದೇಹಗಳನ್ನೂ ಇಲ್ಲಿ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News