ಪುತ್ತೂರು ನಗರಸಭೆಯ 2019-20ನೇ ಸಾಲಿನ ಬಜೆಟ್ ಮಂಡನೆ

Update: 2019-02-22 16:56 GMT

ಪುತ್ತೂರು, ಫೆ. 22: ನಗರಸಭೆಗೆ ಚುನಾವಣೆ ನಡೆದು ಹಲವು ತಿಂಗಳುಗಳು ಕಳೆದರೂ ಇನ್ನೂ ಆಡಳಿತ ಮಂಡಳಿ ರಚನೆಯಾಗದಿರುವ ಹಿನ್ನಲೆಯಲ್ಲಿ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಯವರ ಅನುಮೋದನೆಯಂತೆ ಶುಕ್ರವಾರ ಪುತ್ತೂರು ನಗರಸಭೆಯ 2019-20ನೇ ಸಾಲಿನ ಬಜೆಟನ್ನು ಪೌರಾಯುಕ್ತೆ ರೂಪಾ ಶೆಟ್ಟಿ ಮಂಡಿಸಿದರು. ಒಟ್ಟು ರೂ.41.87 ಕೋಟಿ ಆದಾಯ, ರೂ.41.29 ಕೋಟಿ ರೂ. ವ್ಯಯ ಹಾಗೂ 58.87 ಲಕ್ಷ ರೂ. ಮಿಗತೆ ಬಜೆಟ್‍ನ್ನು ಸಭೆಯಲ್ಲಿ ಮಂಡಿಸಲಾಯಿತು.

12.48 ಕೋಟಿ ರೂ. ಸ್ವಂತ ಆದಾಯ ನಿರೀಕ್ಷಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 17.30 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು. 2019-20ನೇ ಸಾಲಿನಲ್ಲಿ ಸ್ವಂತ ಆದಾಯದಲ್ಲಿ ಕೆಲವೊಂದು ಪ್ರಮುಖ ನಿರೀಕ್ಷಿತ ಆದಾಯಗಳ ವಿವರಗಳನ್ನು ಪೌರಾಯುಕ್ತರು ಈ ಸಂದರ್ಭದಲ್ಲಿ ನೀಡಿದರು.

ಈ ವರ್ಷದಲ್ಲಿ 3.50 ಕೋಟಿ ಆಸ್ತಿ ತೆರಿಗೆಯಿಂದ ಅದಾಯ ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿನ ಶುಲ್ಕದಲ್ಲಿ 3.10 ಕೋಟಿ, ನೀರಿನ ನಳ್ಳಿ ಸಂಪರ್ಕದಲ್ಲಿ 15 ಲಕ್ಷ, ಕಟ್ಟಡ ಹಾಗೂ ಉದ್ಯಮ ಪರವಾನಿಗೆಯಿಂದ 15 ಲಕ್ಷ, ಕರ ಸಂಗ್ರಹಣೆಯಿಂದ 9.10 ಲಕ್ಷ, ಖಾತೆ ಬದಲಾವಣೆ, ಜನನ ಮರಣ ಪ್ರತಿ ನೀಡಿಕೆ ಯಿಂದ 25 ಲಕ್ಷ, ಆಸ್ತಿ ತೆರಿಗೆ ಹಾಗೂ ಉದ್ಯಮ ಪರವಾನಿಗೆಗಳಿಗೆ ವಿಧಿಸುವ ದಂಡನೆಯಿಂದ 45.25 ಲಕ್ಷ, ನವೀಕರಣಗೊಂಡ ಪುರಭವನದಿಂದ 10 ಲಕ್ಷ ಸೇರಿದಂತೆ ಇನ್ನಿತರಗಳಿಂದ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಒಟ್ಟು ನಿರೀಕ್ಷಿತ ಆದಾಯದಿಂದ ಕೆಲವೊಂದು ಮೂಲಭೂತ ಸೌಕರ್ಯಗಳಿಗೆ ಹಂಚಿಕೆ ಮಾಡಲಾಗಿದ್ದು, ಮೂಲಭೂತ ಸೌಕರ್ಯಗಳಿಗಾಗಿ ನಗರಸಭೆಯ ಪ್ರತೀ ವಾರ್ಡ್‍ಗಳಿಗೆ ತಲಾ 10 ಲಕ್ಷ ರೂ., ಪ.ಜಾತಿ, ಪಂಗಡದವರಿಗೆ ಶೇ.24.10ರ ನಿಧಿಯಡಿ 3.10 ಲಕ್ಷ, ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳಿಗೆ ಶೇ.7.25 ರ ನಿಧಿಯಡಿ ಸಹಾಯಧನ ಒದಗಿಸಲು 33.54 ಲಕ್ಷ, ಭಿನ್ನ ಸಾಮಥ್ರ್ಯ ಹೊಂದಿದವರಿಗೆ ಶೇ.5 ನಿಧಿಯಲ್ಲಿ 23.13 ಲಕ್ಷ, ಕಚೇರಿ ಆಡಳಿತ ವ್ಯವಸ್ಥೆ ಸಾರ್ವಜನಿಕರಿಗೆ ತ್ವರಿತಗೊಳಿಸುವ ನಿಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿಗಾಗಿ 15 ಲಕ್ಷ ರೂ., ದಾರಿದೀಪ, ಪ್ರತೀ ವಾರ್ಡಿಗೆ ನೀರು ಸರಬ ರಾಜು, ಹೊರಗುತ್ತಿಗೆ ನಿರ್ವಹಣೆಗೆ, ನಲ್ಮ್ ಯೋಜನೆಯಡಿ ಸಾಲ ಹಾಗೂ ಸಹಾಯಧನ, ಹೊಸ ವಾಹನ ಖರೀದಿಗೆ ಇನ್ನಿತರ ಸೌಲಭ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ನಗರೊತ್ಥಾನದ ಯೋಜನೆಯ 25 ಕೋಟಿ ಅನುದಾನದಲ್ಲಿ ಸುಮಾರು 22 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಆರು ಬೆದ್ರಾಳ-ಸಾಲ್ಮರ, ಬಲ್ನಾಡು ರಸ್ತೆ ಸೇರಿದಂತೆ ಆರು ಕಾಮಗಾರಿಗಳು ಸಂಪೂರ್ಣಗೊಂಡಿದೆ. ಕೋರ್ಟ್ ರಸ್ತೆಯಲ್ಲಿರುವ ಚಿಣ್ಣರ ಪಾರ್ಕ್‍ನ್ನು ನಿರ್ವಹಣೆಗಾಗಿ ಎನ್‍ಜಿಒ ಒಪ್ಪಿಸುವ ಯೋಜನೆಯಿದೆ ಎಂದು ತಿಳಿಸಿದರು.

ನಗರಸಭೆ ತೆರಿಗೆಯನ್ನು ಏ.31 ರೊಳಗೆ ಸಲ್ಲಿಸಿದೆ ಶೇ.5 ರಿಯಾಯಿತಿ ನೀಡಲಾಗುವುದು. ಮೇ-ಜೂನ್ ತಿಂಗಳ ಒಳಗೆ ಸಲ್ಲಿಸಿದರೆ ಯಾವುದೇ ದಂಡ ಇಲ್ಲ. ಜುಲೈ ನಂತರ ಪಾವತಿಸಿದರೆ ಶೇ.2 ದಂಡ ವಿಧಿಸಲಾಗುವುದು. ಆದ್ದರಿಂದ ತೆರಿಗೆಯನ್ನು ಕ್ಲಪ್ತ ಸಮಯದಲ್ಲಿ ಜನತೆ ಪಾವತಿಸಬೇಕು ಎಂದು ಈ ಸಂದರ್ಭ ಆಯುಕ್ತೆ ರೂಪಾ ಶೆಟ್ಟಿ ವಿನಂತಿಸಿದರು.

ವೇದಿಕೆಯಲ್ಲಿ ನಗರ ಸಭೆಯ ಲೆಕ್ಕಾಧಿಕಾರಿ ಪಿ.ಆರ್.ದೇವಾಡಿಗ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News