ಪುತ್ತೂರು : ಪರ್ಸ್ ಹಿಂತಿರುಗಿಸದ ವ್ಯಕ್ತಿಯ ವಿರುದ್ಧ ದೂರು

Update: 2019-02-22 17:05 GMT

ಪುತ್ತೂರು, ಫೆ. 22: ಸೇವಾ ಸಹಕಾರಿ ಬ್ಯಾಂಕೊಂದರಲ್ಲಿ ಮರೆತು ಬಿಟ್ಟು ಹೋಗಿದ್ದ ಹಣವಿದ್ದ ಪರ್ಸನ್ನು ಪಡೆದುಕೊಂಡಿದ್ದ ವ್ಯಕ್ತಿ ಹಿಂತಿರುಗಿಸದೆ ಸತಾಯಿಸ ತೊಡಗಿದ ಹಿನ್ನಲೆಯಲ್ಲಿ ಪರ್ಸ್‍ನ ವಾರಸುದಾರ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಲ ಗ್ರಾಮದ ಕರಿಮಜಲು ನಿವಾಸಿ ವಿಜಯ ವಿಲ್ಸನ್ ದೂರು ನೀಡಿದವರು. ಕೆದಿಲ ಗ್ರಾಮದ ಪಾಟ್ರಕೋಡಿ ನಿವಾಸಿ ಅಬೂಬಕರ್ ಪರ್ಸ್ ಪಡೆದುಕೊಂಡು ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯ ವಿಲ್ಸನ್ ಅವರು ಕಳೆದ ಫೆ.19ರಂದು ಕೆದಿಲ ಸೇವಾ ಸಹಕಾರಿ ಬ್ಯಾಂಕಿಗೆ ಸಾಲ ವಿಚಾರವಾಗಿ ಮಾತನಾಡಲು ತೆರಳಿದ್ದರು. ಸಾಲದ ವಿಚಾರವಾಗಿ ಅವರು ಬ್ಯಾಂಕ್ ಮೆನೇಜರ್ ಜತೆ ಮಾತನಾಡುತ್ತಿದ್ದ ವೇಳೆ ತನ್ನ ಪ್ಯಾಂಟ್ ಕಿಸೆಯಲ್ಲಿದ್ದ  ರೂ. 31 ಸಾವಿರ ನಗದು ಹಣವಿದ್ದ ಪರ್ಸನ್ನು ಚಯರ್ ಮೇಲಿಟ್ಟಿದ್ದರು. ಮನೇಜರ್ ಜತೆ ಮಾತನಾಡಿ ಪರ್ಸನ್ನು ಅಲ್ಲೇ ಬಿಟ್ಟು ಹೋಗಿದ್ದ ಅವರಿಗೆ ಮನೆಗೆ ಹೋಗುತ್ತಿದ್ದ ವೇಳೆ ಪರ್ಸ್ ಬ್ಯಾಂಕಿನಲ್ಲೇ ಬಾಕಿಯಾಗಿರುವುದು ಅರಿವಿಗೆ ಬಂದಿತ್ತು. ಅವರು ಹಿಂತಿರುಗಿ ಬ್ಯಾಂಕಿಗೆ ಬಂದು ನೋಡಿದಾಗ ಹಣವಿದ್ದ ಪರ್ಸ್ ಕಾಣೆಯಾಗಿತ್ತು.

ಈ ವಿಚಾರವನ್ನು ಅವರು ಬ್ಯಾಂಕ್ ಮೆನೇಜರ್ ಅವರ ಗಮನಕ್ಕೆ ತಂದು ಬ್ಯಾಂಕಿನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪಾಟ್ರಕೋಡಿಯ ಅಬೂಬಕರ್ ಎಂಬವರು ಆ ಪರ್ಸನ್ನು ತೆಗೆದುಕೊಂಡು ಹೋಗಿರುವುದು ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಬೂಬಕ್ಕರ್ ಅವರನ್ನು ಸಂಪರ್ಕಿಸಿದರೂ ಅವರು ಪರ್ಸನ್ನು ವಾರಸುದಾರರಿಗೆ ಹಿಂತಿರುಗಿಸದ ಹಿನ್ನೆಲೆಯಲ್ಲಿ ಪೊಲೀಸರು ಅಬೂಬಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News