ಫೆ.24ರಂದು ದ.ಕ. ಜಿಲ್ಲಾ ರೆಡ್‌ಕ್ರಾಸ್ ಚುನಾವಣೆ

Update: 2019-02-23 08:41 GMT

ಮಂಗಳೂರು, ಫೆ.23: ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಘಟಕದ ಆಡಳಿತ ಸಮಿತಿಗೆ ಫೆ.24ರಂದು ಚುನಾವಣೆ ನಡೆಯಲಿದೆ. ರೆಡ್‌ಕ್ರಾಸ್‌ನ ಜಿಲ್ಲಾ ಘಟಕದ 10 ಸದಸ್ಯರ ಸ್ಥಾನಕ್ಕೆ 16 ಮಂದಿ ಸ್ಪರ್ಧೆಯಲ್ಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಚುನಾವಣೆಯ ಕುರಿತು ಮಾಹಿತಿ ನೀಡಿದ ಹಾಲಿ ಅಧ್ಯಕ್ಷ ಸಿಎ ಶಾಂತಾರಾಮ್ ಶೆಟ್ಟಿ, ಕಳೆದ ಮೂರು ವರ್ಷಗಳಲ್ಲಿ ತಮ್ಮ ನೇತೃತ್ವದ ಆಡಳಿತ ಮಂಡಳಿ ಹಲವಾರು ಕಾರ್ಯಕ್ರಮಗಳ ಮೂಲಕ ಕಾರ್ಯನಿರ್ವಹಿಸಿದ್ದು, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.

ತಮ್ಮ ತಂಡದಲ್ಲಿ ತಂಡದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಸತೀಶ್ ಕುಮಾರ್ ಭಂಡಾರಿ, ಉದ್ಯಮಿ ಯೂಜಿನ್ ರೆಂಟ್, ಪಣಂಬೂರು ಬೀಚ್ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಬೈಕಂಪಾಡಿ, ಉದ್ಯಮಿ ಬಿ.ನಿತ್ಯಾನಂದ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಉದ್ಯಮಿ ಆರ್ಚಿಬಲ್ಡ್ ಮಿನೇಜಸ್, ಪತ್ರಕರ್ತ ಬಿ.ರವೀಂದ್ರ ಶೆಟ್ಟಿ, ವೈದ್ಯರಾದ ಡಾ.ಯು.ವಿ.ಶೆಣೈ, ಉಪನ್ಯಾಸಕರಾದ ಸಚೇತ್ ಸುವರ್ಣ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ರವೀಂದ್ರನಾಥ ಕೆ. ಅವರಿದ್ದಾರೆ. ಇವರನ್ನು ಆಯ್ಕೆ ಮಾಡಿ ಮತ್ತೆ ಮೂರು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸೇವೆಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಒಟ್ಟು 16 ಮಂದಿಯಲ್ಲಿ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯರು 10 ಮಂದಿಯನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿ ಚುನಾವಣೆ ಮೂಲಕ ಆಯ್ಕೆ ಮಾಡಬೇಕಾಗಿದೆ. ಪ್ರತಿಯೊಬ್ಬ ಸದಸ್ಯರಿಗೂ 10 ಮಂದಿಗೆ ಮಾತ್ರ ಮತ ಚಲಾವಣೆಗೆ ಅವಕಾಶವಿದೆ. ಹತ್ತು ಅಥವಾ ಅದಕ್ಕಿಂತ ಕಡಿಮೆ ಮಂದಿಗೆ ಮತದಾನ ಮಾಡಿದರೆ ಅಂತಹ ಮತದಾನ ಸಿಂಧುವಾಗುತ್ತದೆ. 10 ಮಂದಿಗಿಂತ ಹೆಚ್ಚು ಮಂದಿಗೆ ಮತ ಹಾಕಿದರೆ ಅಂತಹ ಮತಪತ್ರ ಅಸಿಂಧುವಾಗುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರ್ಚಿಬಾಲ್ಡ್ ಮಿನೇಜಸ್, ನಿತ್ಯಾನಂದ ಶೆಟ್ಟಿ, ಯತೀಶ್ ಬೈಕಂಪಾಡಿ, ರವೀಂದ್ರನಾಥ್ ಕೆ. ಉಪಸ್ಥಿತರಿದ್ದರು.


ಮತದಾನ ಎಲ್ಲಿ?

2019ರಿಂದ 2021ರ ಅವಧಿಗೆ ಆಡಳಿತ ಸಮಿತಿ ಆಯ್ಕೆಗಾಗಿ ನಡೆಯುವ ಈ ಚುನಾವಣೆಯು ಫೆಬ್ರವರಿ 24ರಂದು ರವಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಕಟ್ಟಡಲ್ಲಿ ನಡೆಯಲಿದೆ. ಮತದಾನವು ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ನಡೆಯಲಿದೆ. ಈ ಸಮಯದಲ್ಲಿ ರೆಡ್‌ಕ್ರಾಸ್‌ನ ಗುರುತಿನ ಚೀಟಿ ಅಥವಾ ಆಧಾರ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್ ಸೇರಿದಂತೆ ಫೋಟೋ ಇರುವ ಯಾವುದಾದರೂ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಮತಪತ್ರದಲ್ಲಿ ಅಭ್ಯರ್ಥಿಯ ಹೆಸರು, ೆಟೋ ಮತ್ತು ಚುನಾವಣಾಧಿಕಾರಿ ನೀಡಿರುವ ಚಿಹ್ನೆಯನ್ನು ಮುದ್ರಿಸಲಾಗುತ್ತದೆ. ಗರಿಷ್ಠ ಮತ ಪಡೆದ 10 ಮಂದಿಯನ್ನು ಆಡಳಿತ ಸಮಿತಿಗೆ ಆಯ್ಕೆ ಮಾಡಲಾಗುತ್ತದೆ. ಮತ ಎಣಿಕೆ ಕಾರ್ಯವು ಫೆಬ್ರವರಿ 25ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News