ಕುತ್ತಾರು ಜಂಕ್ಷನ್‌ನಲ್ಲಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುವ ಕೊಳಚೆ ನೀರು *ಸಾರ್ವಜನಿಕರಿಂದ ಪ್ರತಿಭಟನೆಯ ಎಚ್ಚರಿಕೆ

Update: 2019-02-23 12:22 GMT

ಉಳ್ಳಾಲ, ಫೆ.23: ತೊಕ್ಕೊಟ್ಟು ಸಮೀಪದ ಕುತ್ತಾರು ಜಂಕ್ಷನ್‌ನಲ್ಲಿ ಚರಂಡಿ ಅವ್ಯವಸ್ಥೆಯಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಕೂಡ ಸ್ಪಂದಿಸದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಶ್ವತ ಪರಿಹಾರ ದೊರೆಯದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕುತ್ತಾರು ಪರಿಸರದಲ್ಲಿ ನಾಲ್ಕು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳು, 20ಕ್ಕಿಂತ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳು, ವಸತಿ ನಿಲಯಗಳು, ವಾಣಿಜ್ಯ ಸಂಕೀರ್ಣ, ವಸತಿ ಸಂಕೀರ್ಣ ಸೇರಿದಂತೆ ಧಾರ್ಮಿಕ ಕೇಂದ್ರಗಳಿವೆ. ಅಭಿವೃದ್ಧಿ ಪಥದಲ್ಲಿರುವ ಕುತ್ತಾರು ಜಂಕ್ಷನ್‌ನಲ್ಲೇ ರಾಜ್ಯ ಹೆದ್ದಾರಿಯೂ ಇದೆ. ಆದರೆ ಒಳ ಚರಂಡಿ ಸಮಸ್ಯೆಯಿಂದ ಈ ಪ್ರದೇಶ ಬಹಳಷ್ಟು ವರ್ಷಗಳಿಂದ ನಲುಗುತ್ತಿದೆ. ವಸತಿ, ವಾಣಿಜ್ಯ ಸಂಕೀರ್ಣ ಸೇರಿದಂತೆ ಮನೆಮಂದಿ ಬಿಡುವ ಕೊಳಚೆ ನೀರು ಹೆದ್ದಾರಿ ಬದಿಯಲ್ಲಿ ಮಡುಗಟ್ಟಿ ನಿಂತಿದೆ. ಹಲವು ಮನೆಗಳಿರುವ ಪ್ರದೇಶವಾದರೂ ಕೊಳಚೆ ನೀರು ತೆರೆದ ಚರಂಡಿಯಲ್ಲೇ ಹರಿಯುತ್ತಿವೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ.

ಸ್ವಚ್ಛ ಭಾರತ ಸಂಕಲ್ಪದಂತೆ ಪ್ರತಿ ಮನೆಗಳಿಗೆ ಶೌಚಾಲಯಗಳಿದ್ದರೂ ಅದರ ಕೊಳಚೆ ನೀರು ರಸ್ತೆಬದಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಪರಿಸರವು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದರೂ ಕೂಡ ಶುಚಿತ್ವದಲ್ಲಿ ಹಿಂದೆ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News