ಮಹಿಳೆಯರಿಗೆ ಇಲಾಖೆ ವಿಶೇಷ ಕಾರ್ಯಕ್ರಮ: ಎಸ್ಪಿ ನಿಶಾ ಜೇಮ್ಸ್

Update: 2019-02-23 13:28 GMT

ಉಡುಪಿ, ಫೆ.23: ಉಡುಪಿ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕಿಯಾಗಿ ನಿಶಾ ಜೇಮ್ಸ್ ಫೆ.23ರಂದು ಅಧಿಕಾರ ವಹಿಸಿಕೊಂಡರು.

ಬೆಂಗಳೂರಿನ ನಿಸ್ತಂತು(ವಯರ್‌ಲೆಸ್) ವಿಭಾಗದ ಎಸ್ಪಿಯಾಗಿ ವರ್ಗಾವಣೆ ಗೊಂಡಿರುವ ನಿಗರ್ಮನ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅಧಿಕಾರವನ್ನು ನಿಶಾ ಜೇಮ್ಸ್‌ಗೆ ಹಸ್ತಾಂತರಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕುಮಾರಚಂದ್ರ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್, ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ನಿಶಾ ಜೇಮ್ಸ್, ಕರಾವಳಿಯಲ್ಲಿ ನಾನು ಈವರೆಗೆ ಕೆಲಸ ಮಾಡಿಲ್ಲ. ಮುಂದುವರಿದ ಹಾಗೂ ಅಭಿವೃದ್ಧಿ ಹೊಂದಿದ್ದ ಈ ಜಿಲ್ಲೆಯ ಜನ ಜನ ಕೂಡ ಒಳ್ಳೆಯವರು ಮತ್ತು ಶಿಕ್ಷಿತರಾಗಿದ್ದಾರೆ. ಆದುದರಿಂದ ಒಳ್ಳೆಯ ಅನುಭವ ಸಿಗಬಹುದೆಂಬ ಆಶಯ ಇದೆ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು ಇಲಾಖೆಯ ಮುಖ್ಯ ಕರ್ತವ್ಯವಾಗಿದೆ. ಆದುದರಿಂದ ಅಕ್ರಮ ಚಟುವಟಿಕೆ, ಕೋಮು ಸಂಘರ್ಷ, ರೌಡಿಸಂಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ನಿಷ್ಪಕ್ಷವಾಗಿ ಪೂರ್ಣ ಅಧಿಕಾರವನ್ನು ಚಲಾಯಿಸಿ ಕಾನೂನು ಕ್ರಮ ಜರಗಿಸಲಾಗುವುದು. ಸಾರ್ವಜನಿಕರು ಯಾವುದೇ ಭಯ ಇಲ್ಲದೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.

ಇಲಾಖೆಯಿಂದ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ಪ್ರಯತ್ನ ಮಾಡಲಾಗುವುದು. ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ರಚಿಸಿದ್ದ ಓಬವ್ವ ಪಡೆಯಿಂದ ಪ್ರೇರಣೆ ಪಡೆದು, ಕೆಳದಿ ಚೆನ್ನಮ್ಮ ಪಡೆಯನ್ನು ಸಾಗರದಲ್ಲಿ ರಚನೆ ಮಾಡಿದ್ದೆ. ಅದೇ ರೀತಿಯ ಪಡೆಯನ್ನು ಇಲ್ಲಿಯೂ ರಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಫೋನ್ ಇನ್ ಸೇರಿದಂತೆ ಹಿಂದಿನ ಎಸ್ಪಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಮುಂದುವರಿಸಲಾಗುವುದೆಂದು ಅವರು ಹೇಳಿದರು.

ಇದು ನನ್ನ ಎರಡನೆ ಜಿಲ್ಲೆಯಾಗಿದ್ದು, ಇನ್ನಷ್ಟು ಅನುಭವಗಳು ನನಗೆ ಬೇಕಾಗಿವೆ. ಇಲ್ಲಿನ ಜನರು, ರಾಜಕೀಯ, ಪರಿಸ್ಥಿತಿಯನ್ನು ತಿಳಿದುಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೂ ನಾನು ಪ್ರಾಮಾಣಿಕ ಹಾಗೂ ನಿಷ್ಪಕ್ಷವಾಗಿ ಕೆಲಸ ಮಾಡುತ್ತೇನೆ. ನನಗೆ ಉಡುಪಿ ಹೊಸ ಪ್ರದೇಶವಾದರೂ ಇಲಾಖೆಗೆ ಬಹಳ ದೊಡ್ಡ ಇತಿಹಾಸ ಇದೆ. ಇದರಲ್ಲಿ ಅನುಭವಸ್ಥರು ತುಂಬಾ ಜನ ಇದ್ದಾರೆ. ಆದುದರಿಂದ ಅಧಿಕಾರಿಗಳು ಸಿಬ್ಬಂದಿಗಳೆಲ್ಲ ಸೇರಿ ಕೆಲಸ ಮಾಡ ಬೇಕಾಗುತ್ತದೆ. ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಕೆಲಸಗಳನ್ನು ನಾವು ಮೊದಲೇ ಹೇಳುವುದು ಸರಿಯಲ್ಲ. ಒಂದೊಂದು ಪ್ರದೇಶವು ಒಂದೊಂದು ರೀತಿಯಲ್ಲಿ ಇರುತ್ತದೆ. ಅಲ್ಲಿಯ ಸಮಸ್ಯೆಗಳು ಕೂಡ ವಿಭಿನ್ನವಾಗಿರುತ್ತವೆ. ಅದನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಕೆಲಸ ಮಾಡಲಾಗುವುದು. ಮೊದಲು ಜಿಲ್ಲೆಯ ಬಗ್ಗೆ ತಿಳಿದುಕೊಂಡು ಮುಂದೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.

ಬಿಬಿಸಿಯ ಸಂಪಾದಕೀಯದಲ್ಲಿ ಕೆಲಸ!

ಮೂಲತಃ ಕೇರಳದವರಾದ ನಿಶಾ ಜೇಮ್ಸ್, ದೆಹಲಿಯಲ್ಲಿ ಹುಟ್ಟಿ ಬೆಳೆದಿದ್ದು, ಎಂ.ಎ. ಇಂಗ್ಲಿಷ್ ಸಾಹಿತ್ಯದಲ್ಲಿ ಶಿಕ್ಷಣ ಪೂರೈಸಿದ್ದಾರೆ. ಇವರು ಬಿಬಿಸಿ ಚಾನೆಲ್‌ನ ಸಂಪಾದಕೀಯ ವಿಭಾಗದಲ್ಲಿ ಒಂದೂವರೆ ವರ್ಷ ಕಾಲ ಕೆಲಸ ನಿರ್ವಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರೊಬೆಶನರಿ ಆಗಿ ಆರು ತಿಂಗಳ ಗಳ ಕಾಲ, ಸಾಗರದಲ್ಲೆ ಸಹಾಯಕ ಪೊಲೀಸ್ ಅಧೀಕ್ಷಕಿಯಾಗಿ, ಇಂಟೆಲಿಜೆನ್ಸ್ ನಲ್ಲಿ ವಿಐಪಿ ಸೆಕ್ಯುರಿಟಿಯಲ್ಲಿ ಎಸ್ಪಿಯಾಗಿ ಇವರು ಕರ್ತವ್ಯ ನಿರ್ವಹಿಸಿದ್ದರು. ರಾಯಚೂರಿನಲ್ಲಿ ಎಸ್ಪಿಯಾಗಿ ನಂತರ ವರ್ಗಾವಣೆಗೊಂಡು ಕೆಎಸ್‌ಆರ್‌ಪಿ ಘಟಕದಲ್ಲಿ ಕಮಾಂಡೆಂಟ್, ಮುನಿರಾಬಾದ್‌ನ ಇಂಡಿಯನ್ ರಿಸರ್ವ್ ಬೆಟಾಲಿಯನ್ ಮತ್ತು ಬೆಂಗಳೂರು ಕೋರಮಂಗಲದ ಕೆಎಸ್‌ಆರ್‌ಪಿ ನಾಲ್ಕನೆ ಬೆಟಾಲಿಯನ್‌ನಲ್ಲಿ ಅವರು ಈವರೆಗೆ ಕೆಲಸ ಮಾಡಿದ್ದಾರೆ.

ಜಿಲ್ಲೆಯಲ್ಲಿ ಎದುರಾದ ಸಾಕಷ್ಟು ಸವಾಲುಗಳು ಅನುಭವವನ್ನು ಕೊಟ್ಟಿವೆ. ಚುನಾವಣೆ ಸೇರಿದಂತೆ ಹಲವು ಘಟನೆಗಳನ್ನು ಇಡೀ ಪೊಲೀಸ್ ಇಲಾಖೆ ಸಮರ್ಥವಾಗಿ ನಿಬಾಯಿಸಿದೆ. ಈ ಎಲ್ಲ ಕೆಲಸ ಕಾರ್ಯಗಳ ಕ್ರೆಡಿಟ್ ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳಿಗೆ ಸಲ್ಲುತ್ತದೆ. ಇಲ್ಲಿಯ ಅನುಭವ ಮುಂದಿನ ವೃತ್ತಿ ಜೀವನದಲ್ಲಿ ಸಾಕಷ್ಟು ಸಹಾಯವಾಗುತ್ತದೆ. ಇದಕ್ಕಿಂತ ಹೆಚ್ಚಿನ ಕೆಲಸ ಹೊಸ ಎಸ್ಪಿಯವರು ಮಾಡಲಿದ್ದಾರೆ. ವರ್ಗಾವಣೆಗಳು ಸರಕಾರಿ ಅಧಿಕಾರಿಗಳಿಗೆ ಸಾಮಾನ್ಯ. ವಯರ್‌ಲೆಸ್ ವಿಭಾಗದಲ್ಲಿಯೂ ಮಾಡಲು ಸಾಕಷ್ಟು ಕೆಲಸ ಇವೆ. ಅಲ್ಲಿಯೂ ನನ್ನಿಂದ ಆದಷ್ಟು ಕೊಡುಗೆಗಳನ್ನು ನೀಡುತ್ತೇನೆ.
-ಲಕ್ಷ್ಮ್ ಬಿ.ನಿಂಬರಗಿ, ನಿಗರ್ಮನ ಎಸ್ಪಿ, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News