‘ನಕಾರಾತ್ಮಕ ಭಾವನೆ ಸಕಾರಾತ್ಮಕವಾಗಿ ಬದಲಾಯಿಸಿ’

Update: 2019-02-23 14:14 GMT

ಮಂಗಳೂರು, ಫೆ.23: ನಕಾರಾತ್ಮಕ ಭಾವನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿ ಬದುಕುವುದು ಜಗತ್ತಿನಲ್ಲಿ ತುಂಬಾ ಮುಖ್ಯ ಎಂದು ಖ್ಯಾತ ದಂತ ವೈದ್ಯ ಮತ್ತು ಕಾರ್ಪೊರೇಟ್ ತರಬೇತುದಾರ ಡಾ.ರಾಹುಲ್ ಟಿ.ಜಿ. ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಸಂಘ ಅಂತರ್ ವ್ಯಕ್ತಿಯ ಸಂವಹನ ಮತ್ತು ಆತ್ಮಗೌರವ ಕುರಿತಾಗಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಾರ್ಪೊರೇಟ್ ತರಬೇತುದಾರ ವಿಶಾಲ್ ಎನ್. ಮಾತನಾಡಿ, ದೃಢ ಸಂಕಲ್ಪದಿಂದ ಯಾವುದೇ ಕಾರ್ಯ ಅಸಾಧ್ಯವಲ್ಲ, ಯಶಸ್ಸು ಖಂಡಿತ ಕೈಗೆಟುಕುತ್ತದೆ ಎಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಉದಯ್‌ಕುಮಾರ್, ಸತತ ಪ್ರಯತ್ನದಿಂದ ಯಾವುದೇ ಕಾರ್ಯ ನಿರ್ವಹಿಸಿದರೆ ಉತ್ತಮ ಭವಿಷ್ಯ ನಮ್ಮದಾಗುತ್ತದೆ. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ, ಇಲ್ಲಿ ಪೂರ್ಣವಿರಾಮ ಎಂಬುದಿಲ್ಲ ಎಂದರು.

ಸಿಪಿಇ ಸಂಯೋಜಕಿ ಡಾ.ಲತಾ ಎ. ಪಂಡಿತ್, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಮೀನಾ ಎಸ್. ಕಜಂಪಾಡಿ, ವಿಭಾಗದ ಡೀನ್ ಸುನಂದಾ, ಅಂತಿಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿಭಾಗದ ಉಪನ್ಯಾಸಕ ಕಾರ್ತಿಕ್ ಪೈ ಎಚ್. ಕಾರ್ಯಕ್ರಮ ನಿರೂಪಿಸಿದರು. ರೇಖಾ ಡಿ.ಎನ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News