×
Ad

ತನುಶ್ರೀ ಪಿತ್ರೋಡಿಯಿಂದ ‘ಧನುರಾಸನ’ ಭಂಗಿಯಲ್ಲಿ ಎರಡು ಹೊಸ ವಿಶ್ವದಾಖಲೆ

Update: 2019-02-23 19:54 IST

ಉಡುಪಿ, ಫೆ. 23: ಈಗಾಗಲೇ ಗಿನ್ನೆಸ್ ಸೇರಿದಂತೆ ಎರಡು ವಿಶ್ವದಾಖಲೆ ಯನ್ನು ಬರೆದ ಉಡುಪಿಯ ಪ್ರತಿಭೆ ತನುಶ್ರೀ ಪಿತ್ರೋಡಿ ‘ಧನುರಾಸನ’ ಎಂಬ ಯೋಗಾಸನ ಭಂಗಿಯಲ್ಲಿ ಅತಿಹೆಚ್ಚು ಬಾರಿ ಮುಂದೆ ಉರುಳುತ್ತ ಸಾಗುವ ಮೂಲಕ ಮತ್ತೆ ಎರಡು ವಿಶ್ವ ದಾಖಲೆಗಳನ್ನು ಮಾಡಿದ್ದಾರೆ.

ಉಡುಪಿಯ ಸೈಂಟ್ ಸಿಸಿಲೀಸ್ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಪ್ರಯತ್ನದಲ್ಲಿ ತನುಶ್ರೀ ಪಿತ್ರೋಡಿ, ಒಂದು ನಿಮಿಷದಲ್ಲಿ 62 ಬಾರಿ ಮತ್ತು ಅತಿವೇಗದ 1:40:35 ನಿಮಿಷದಲ್ಲಿ ಧನುರಾಸನ ಭಂಗಿ ಯಲ್ಲಿ 100 ಬಾರಿ ಉರುಳುತ್ತ ಸಾಗುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ಎರಡು ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ.

10ರ ಹರೆಯದ ಉಡುಪಿ ಸೈಂಟ್ ಸಿಸಿಲೀಸ್ ಕನ್ನಡ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ತನುಶ್ರೀ, ಈ ಹಿಂದೆ ಪೂರ್ಣ ಚಕ್ರಾಸನ ವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಮತ್ತು ತನ್ನ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ಒಂದು ನಿಮಿಷಕ್ಕೆ 42 ಬಾರಿ ತಿರುಗಿಸುವ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಡಾ. ಮನೀಶ್ ಬಿಷ್ಣುಯಿ ಎರಡು ದಾಖಲೆಗಳ ಪ್ರಮಾಣ ಪತ್ರವನ್ನು ತನುಶ್ರೀ ಪಿತ್ರೋಡಿಗೆ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ತನುಶ್ರೀ ತಂದೆ ಉದಯ ಕುಮಾರ್ ಮತ್ತು ತಾಯಿ ಸಂಧ್ಯಾ ಹಾಜರಿದ್ದರು. ಧರ್ಮಗುರು ಫಾ. ವಿಲಿಯಂ ಮಾರ್ಟಿಸ್ ಹಾಗೂ ಬಿಲ್ಲವ ಯುವ ವೇದಿಕೆಯ ವತಿಯಿಂದ ತನುಶ್ರೀ ಪಿತ್ರೋಡಿಗೆ ತಲಾ 10 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಲಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಕಾರ್ಯಕ್ರಮದ ಆಯೋಜಕ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಾವರ ನಾಗೇಶ್ ಕುಮಾರ್, ವಿಜಯ ಕುಮಾರ್ ಉದ್ಯಾವರ, ಶಾಲಾ ಸಂಚಾಲಕಿ ಸಿಸ್ಟರ್ ಮೇಝಿ, ಪ್ರಾಂಶುಪಾಲೆ ಸಿಸ್ಟರ್ ವಿಭಾ ಶುಭಹಾರೈಸಿದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ವೆಂಕಟರಮಣ ಸ್ಪೊರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ಮಲ್ಲೇಶ್ ಕುಮಾರ್ ಪಿತ್ರೋಡಿ, ಭರತನಾಟ್ಯ ಗುರುಗಳಾದ ರಾಮಕೃಷ್ಣ ಕೊಡಂಚ, ವಿಜಯ ಕೋಟ್ಯಾನ್ ಪಿತ್ರೋಡಿ ಮೊದಲಾದವರು ಉಪಸ್ಥಿತರಿದ್ದರು. ಎರೋಲ್ ಕಾರ್ಯಕ್ರಮ ನಿರೂಪಿಸಿದರು.

ದಾಖಲೆಗಳು ಹುತಾತ್ಮ ಯೋಧರಿಗೆ ಅರ್ಪಣೆ

ಎರಡು ವಿಶ್ವದಾಖಲೆಯ ಪ್ರಮಾಣಪತ್ರವನ್ನು ಸ್ವೀಕರಿಸಿದ ತನುಶ್ರೀ ಪಿತ್ರೋಡಿ, ಬಳಿಕ ಅದನ್ನು ಕ್ರೀಡಾಂಗಣದಲ್ಲಿರಿಸಲಾದ ಹುತಾತ್ಮ ಸೈನಿಕರ ಭಾವಚಿತ್ರದ ಎದುರು ಇರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

‘ಒಂದೇ ಬಾರಿಗೆ ಎರಡು ವಿಶ್ವದಾಖಲೆ ಮಾಡಿರುವುದು ತುಂಬಾ ಖುಷಿ ಯಾಯಿತು. ಈ ಹಿಂದೆ ಮಾಡಿರುವ ಎರಡು ದಾಖಲೆ ಹಾಗೂ ಈಗ ಮಾಡಿ ರುವ ಎರಡು ದಾಖಲೆಗಳನ್ನು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ದಾಳಿಗೆ ಹುತಾತ್ಮರಾದ ಎಲ್ಲ ವೀರ ಯೋಧರಿಗೆ ಅರ್ಪಿಸಿದ್ದೇನೆ’ ಎಂದು ಸಾಧಕಿ ತುನುಶ್ರೀ ಪಿತ್ರೋಡಿ ತಿಳಿಸಿದರು.

ಈ ದಾಖಲೆಗೆ ಪೂರ್ವತಯಾರಿ ಮಾಡುವ ಆಕೆ ನಿಮಿಷಕ್ಕೆ 54 ಬಾರಿ ಉರುಳುತ್ತ ಸಾಗಿದ್ದಳು. ಈಗ ನಮಗೆ ನಂಬಲು ಆಗುತ್ತಿಲ್ಲ. ಅದೆನ್ನಲ್ಲ ಮೀರಿ ಒಂದು ನಿಮಿಷದಲ್ಲಿ 62 ಬಾರಿ ಉರುಳುವ ಮೂಲಕ ಹೊಸ ಎರಡು ದಾಖಲೆ ಮಾಡಿದ್ದಾಳೆ. ಅವಳು ಯಕ್ಷಗಾನ ಹಾಗೂ ಕಳೆದ ಐದು ವರ್ಷಗಳಿಂದ ಭರತ ನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಈ ಸಾಧನೆ ಮಾಡಲು ಇದೆಲ್ಲವೂ ಸಹಕಾರಿಯಾಗಿದೆ ಎಂದು ತನುಶ್ರೀ ತಾಯಿ ಸಂಧ್ಯಾ ಆನಂದ ವ್ಯಕ್ತಪಡಿಸಿದರು.

ತನುಶ್ರೀ ಪಿತ್ರೋಡಿ ಒಂದು ನಿಮಿಷದಲ್ಲಿ 62 ಮತ್ತು ಕಡಿಮೆ ಅವಧಿಯಲ್ಲಿ 100 ಬಾರಿ ಧನುರಾಸನ ಭಂಗಿಯಲ್ಲಿ ಉರುಳುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಇದೆರೆಡು ತುಂಬಾ ಕಠಿಣವಾದ ಸಾಧನೆಯಾ ಗಿದೆ. ಈಗ ನಾವು ಆಕೆಗೆ ಪ್ರದಾನ ಮಾಡಿರುವುದು ತಾತ್ಕಾಲಿಕ ಪ್ರಮಾಣ ಪತ್ರವಾಗಿದ್ದು, ಮುಂದೆ ವೀಡಿಯೊವನ್ನು ಪರಿಶೀಲಿಸಿ ಅದರಲ್ಲಿ ನಿಖರವಾದ ಅಂಕೆಗಳನ್ನು ದಾಖಲಿಸಿ ಅಂತಿಮ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಡಾ. ಮನೀಶ್ ಬಿಷ್ಣುಯಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News