ಸಾಹಿತ್ಯ ವಿಮರ್ಶೆ ಅಳಿವಿನಂಚಿಗೆ: ಬಿ.ಜನಾರ್ದನ ಭಟ್

Update: 2019-02-23 14:59 GMT

ಉಡುಪಿ, ಫೆ.23: ಸಾಹಿತ್ಯ ವಿಮರ್ಶೆ ಎಂಬುದು ಇಂದು ಅಳಿವಿನಂಚಿ ನಲ್ಲಿದೆ. ವಿಮರ್ಶೆಗೆ ಸರಿಯಾದ ಅವಕಾಶ ಹಾಗೂ ವೇದಿಕೆ ದೊರೆಯದಿ ರುವುದೇ ಇದಕ್ಕೆ ಕಾರಣ ಎಂದು ವಿಮರ್ಶಕ, ಕಾದಂಬರಿಕಾರ, ಸಾಹಿತಿ ಡಾ. ಬಿ.ಜನಾರ್ದನ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಎಂಜಿಎಂ ಕಾಲೇಜು ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವತಿಯಿಂದ ನೀಡಲಾಗುವ ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ ಯನ್ನು ತನ್ನ ‘ನಾಲ್ಕು ಪ್ರಸ್ತಾವನೆಗಳು; ಕರಾವಳಿ ಸಾಹಿತ್ಯ ಕಥನ’ ಕೃತಿಗೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

‘ವಿಮರ್ಶೆ ಎಂಬುದು ಅಳಿವಿನಂಚಿಲ್ಲಿರುವ ಸಾಹಿತ್ಯ ಪ್ರಬೇಧ’ ಎಂಬ ವಿಮರ್ಶಕ ಓ.ಎಲ್.ನಾಗಭೂಷಣ್ ಅವರ ಅಭಿಪ್ರಾಯ ಸರಿಯಾಗಿದೆ. ವಿಮರ್ಶೆ ಇಂದು ಮುಂಚೂಣಿಯಲ್ಲಿ ಕಾಣಿಸುತ್ತಿಲ್ಲ. ಇಂದು ಯಾರೂ ಸಾಹಿತ್ಯವನ್ನು ನೇರವಾಗಿ ವಿಮರ್ಶೆ ಮಾಡುತ್ತಿಲ್ಲ ಎಂದರು.

ಸಾಮಾಜಿಕ ಜಾಲತಾಣ ಎಂಬುದು ಇಂದು ಹೊಲಸುಗೆಟ್ಟು ಹೋಗಿದೆ. ಟ್ರೋಲಿಂಗ್ ಅಸಹ್ಯ ಮಟ್ಟದಲ್ಲಿದೆ. ಜಾಲತಾಣಗಳಲ್ಲಿ ಬರೆಯುವವರು ರಾಜಕೀಯ ಹಾಗೂ ಸಮಾಜ ಶಾಸ್ತ್ರದ ಕುರಿತು ಮಾತನಾಡುತ್ತಾರೆಯೇ ವಿನ:ಹ ಸಾಹಿತ್ಯ, ವಿಮರ್ಶೆಯ ಬಗ್ಗೆ ಯಾರೂ ಬರೆಯುತ್ತಿಲ್ಲ ಎಂದರು.

ವಿಮರ್ಶಕರು ಹೊಸ ಬರವಣಿಗೆಯನ್ನು ಗಮನಿಸುತ್ತಿಲ್ಲ ಎಂಬುದು ಇನ್ನೊಂದು ಟೀಕೆ. ವಿಮರ್ಶೆಗೆ ಅವಕಾಶ ಬೇಕು, ವೇದಿಕೆ ಬೇಕು. ಈ ನಿಟ್ಟಿನಲ್ಲಿ ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್ತು ಗಮನ ಹರಿಸಬೇಕು. ಸಾಹಿತ್ಯ ವಿಮರ್ಶೆ ಎಂಬ ಪ್ರಬೇಧವನ್ನು ಉಳಿಸಬೇಕು ಎಂದು ಡಾ.ಭಟ್ ಮನವಿ ಮಾಡಿದರು.

ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್‌ಗಳು ಇಂದು ಪ್ರಶಸ್ತಿ ವಿತರಣೆಗೆಂದು ಕೋಟ್ಯಂತರ ರೂ.ಗಳನ್ನು ವ್ಯಯಿಸುತ್ತಿವೆ. ಇದಕ್ಕೆ ಬದಲು ವಿಮರ್ಶೆಗೆ ಆದ್ಯತೆ ನೀಡಿ, ಒಂದೊಂದು ಪ್ರಕಾರದ ವಿಮರ್ಶೆಗಳನ್ನು ಬರೆಸಿದರೆ ಅದರಿಂದ ಈ ಪ್ರಬೇಧ ಉಳಿಯಲು ಸಾಧ್ಯವಾಗಬಹುದು ಎಂದರು.

ಇದರೊಂದಿಗೆ ನಡೆದ ಮುದ್ದಣ ಸಾಹಿತ್ಯೋತ್ಸವದಲ್ಲಿ ಮುದ್ದಣನ ಕುರಿತು ಮಾತನಾಡಿದ ಲೇಖಕ ಹಾಗೂ ಚಿಂತಕ ಡಾ.ಎಂ.ಪ್ರಭಾಕರ ಜೋಶಿ, ಮುದ್ದಣ ಸಣ್ಣ ಪ್ರಾಯದಲ್ಲೇ ನಿಧನರಾದರೂ, ಆ ಬಳಿಕ ಅವರಿಗೆ ಸಾಹಿತ್ಯ ಲೋಕದಲ್ಲಿ ಸಿಗಬೇಕಾದ ಎಲ್ಲಾ ಮಾನ್ಯತೆ ಹಾಗೂ ಗೌರವಗಳು ಕನ್ನಡದಲ್ಲಿ ದೊರಕಿವೆ ಎಂದರು. ಆ ಬಳಿಕ ಅವರಿಗೆ ಸಾಹಿತ್ಯ ಲೋಕದಲ್ಲಿ ಸಿಗಬೇಕಾದ ಎಲ್ಲಾ ಮಾನ್ಯತೆ ಹಾಗೂ ಗೌರವಗಳು ಕನ್ನಡದಲ್ಲಿ ದೊರಕಿವೆ ಎಂದರು. ಯಕ್ಷಗಾನ ಕವಿಯಾಗಿ ಮುದ್ದಣ ಕ್ರಾಂತಿಕಾರಿ. ನೂತನ ಪ್ರಸಂಗದ ಪರಂಪರೆ ಯನ್ನು ಪ್ರಾರಂಭಿಸಿದ್ದೆ ಮುದ್ದಣ. ಆತನ ‘ರತ್ನಾವರಿ ಕಲ್ಯಾಣ’ ಹಾಗೂ ‘ಕುಮಾರ ವಿಜಯ’ ಈ ಸಾಲಿಗೆ ಸೇರುತ್ತದೆ. ಅದೇ ರೀತಿ ‘ಅದ್ಭುತ ರಾಮಾಯಣ’ ಹಾಗೂ ‘ರಾಮಾಶ್ವಮೇಧ’ಗಳ ಮೂಲಕ ಕಾದಂಬರಿಯ ಅಂಧವನ್ನು ಮಹಾಕಾವ್ಯಗಳ ಮೂಲಕ ನೀಡಿದ್ದಾನೆ ಎಂದು ಡಾ.ಜೋಶಿ ನುಡಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಮಾಲತಿದೇವಿ ಉಪಸ್ಥಿತರಿದ್ದರು.

ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪ್ರಶಸ್ತಿ ಪುರಸ್ಕೃತರು ಹಾಗೂ ಕೃತಿ ಪರಿಚಯ ಮಾಡಿದರು.

ಉಪನ್ಯಾಸಕಿ ಶೀಲಾ ಅತಿಥಿಗಳನ್ನು ಪರಿಚಯಿಸಿ ವಂದಿಸಿದರೆ, ಶಮಂತ್ ಕುಮಾರ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ‘ಮಾಯಾಪುರಿ’ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News