ಅಸ್ಸಾಂ: ಪೌರತ್ವ ಸಾಬೀತು ಮಾಡುವಂತೆ ಮೂವರು ಯೋಧರಿಗೆ ಸೂಚನೆ !

Update: 2019-02-23 14:59 GMT

ಗುವಾಹಟಿ, ಫೆ.23: ಪೌರತ್ವವನ್ನು ಸಾಬೀತುಗೊಳಿಸುವಂತೆ ಅಸ್ಸಾಂನ ಬಾರಪೇಟ ಜಿಲ್ಲೆಯ ಮೂವರು ಸಹೋದರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇವರಲ್ಲಿ ಇಬ್ಬರು ಸೇನಾಪಡೆಯಲ್ಲಿ ಮತ್ತೊಬ್ಬ ಸಿಐಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಿರಿಯ ಸಹೋದರ ಸಾಹಿದುಲ್ ಇಸ್ಲಾಂ ಸೇನೆಯ ಸುಬೇದಾರ್ ಆಗಿ ಕೋಲ್ಕತಾದಲ್ಲಿ, ಎರಡನೆಯ ಸಹೋದರ ದಿಲ್ಬರ್ ಹುಸೇನ್ ಲಕ್ನೊದಲ್ಲಿ ನಾಯ್ಕ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಕಿರಿಯ ಸಹೋದರ ಮಿಝನುರ್ ರಹ್ಮಾನ್ ಸಿಐಎಸ್‌ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ನ ಚೆನ್ನೈ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ತಾಯಿಗೂ ಇದೇ ರೀತಿಯ ನೋಟಿಸನ್ನು ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ.

ಅಸ್ಸಾಂ ಪೊಲೀಸ್ ಇಲಾಖೆಯ ಗಡಿ ಪೊಲೀಸ್ ವಿಭಾಗದ ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತಮಗೆ ನೋಟಿಸ್ ಜಾರಿಗೊಳಿಸಲಾಗಿದೆ. ಕೆಲವೊಂದು ತಪ್ಪುಗಳಿರುವ ಕಾರಣ ಸೂಕ್ತ ದಾಖಲೆಪತ್ರದ ಸಹಿತ ವಿದೇಶೀಯರ ನ್ಯಾಯಮಂಡಳಿ(ಫಾರಿನರ್ಸ್ ಟ್ರಿಬ್ಯೂನಲ್)ಯೆದುರು ಹಾಜರಾಗಿ ವಿವರಣೆ ನೀಡುವಂತೆ ತಿಳಿಸಲಾಗಿತ್ತು. ಅದರಂತೆ ನವೆಂಬರ್‌ನಲ್ಲಿ ಹಾಜರಾಗಿ ದಾಖಲೆ ಪತ್ರ ಸಲ್ಲಿಸಿದ್ದೇವೆ. ಆದರೆ ನಾಲ್ಕು ತಿಂಗಳಾದರೂ ಅವರಿಂದ ಪ್ರತಿಕ್ರಿಯೆಯಿಲ್ಲ. ಈ ಬಗ್ಗೆ ವಿಚಾರಿಸಿದರೆ ಮುಂದಿನ ವಿಚಾರಣೆಯನ್ನು ಮಾರ್ಚ್ 18ಕ್ಕೆ ನಿಗದಿಗೊಳಿಸಲಾಗಿರುವುದಾಗಿ ತಿಳಿಸಿದ್ದಾರೆ ಎಂದು ಸಹೋದರರು ಅಳಲು ತೋಡಿಕೊಂಡಿದ್ದಾರೆ.

ತಮ್ಮ ತಂದೆ ಹಾಗೂ ಅಜ್ಜನ ಹೆಸರು 1951ರ ರಾಷ್ಟ್ರೀಯ ಪೌರರ ನೋಂದಣಿ(ಎನ್‌ಆರ್‌ಸಿ)ಯಲ್ಲಿ ಹಾಗೂ ಆ ಬಳಿಕದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆ . ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶೀಯರನ್ನು ಪತ್ತೆಹಚ್ಚುವ ಎನ್‌ಆರ್‌ಸಿ ಪ್ರಕ್ರಿಯೆಯ ಪ್ರಕಾರ, 1951ರ ಎನ್‌ಆರ್‌ಸಿಯಲ್ಲಿ ನಿವಾಸಿಗಳ ಅಥವಾ ಅವರ ಪೋಷಕರ ಹೆಸರು ಸೇರ್ಪಡೆಗೊಂಡಿದ್ದರೆ ಅವರನ್ನು ಭಾರತೀಯರೆಂದು ಪರಿಗಣಿಸಲಾಗುವುದು.

 ಹಲವು ವರ್ಷಗಳಿಂದ ಯೋಧರಾಗಿ ದೇಶದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ ಈಗ ಏಕಾಏಕಿ ನಮ್ಮ ಪೌರತ್ವ ದಾಖಲೆಯಲ್ಲಿ ತಪ್ಪಿದೆ, ಸರಿಪಡಿಸಿ ಎಂದು ಕಿರುಕುಳ ನೀಡುತ್ತಿದ್ದಾರೆ. ನೋಟಿಸ್ ತಲುಪಿದ ತಿಂಗಳೊಳಗೇ ದಾಖಲೆ ಒದಗಿಸಿದ್ದೇವೆ. ಆದರೆ ನಾಲ್ಕು ತಿಂಗಳಾದರೂ ಅಧಿಕಾರಿಗಳಿಂದ ಪ್ರತಿಕ್ರಿಯೆ ಇಲ್ಲ. ಆಗಾಗ ವಿಚಾರಣೆಗೆ ಹಾಜರಾಗಲು ನಮಗೆ ರಜೆಯ ಸಮಸ್ಯೆಯಿದೆ. ಆದ್ದರಿಂದ ಈ ಕುರಿತು ಮಾಧ್ಯಮದಲ್ಲಿ ಅಳಲು ತೋಡಿಕೊಂಡಿದ್ದೇವೆ ಎಂದು ಸಹೋದರರು ಹೇಳಿದ್ದಾರೆ.

ಅಸ್ಸಾಂನಲ್ಲಿ ಸುಮಾರು 100 ವಿದೇಶೀಯರ ನ್ಯಾಯಮಂಡಳಿ ಇದೆ. ಈ ನ್ಯಾಯಮಂಡಳಿ ವಿದೇಶೀಯರೆಂದು ಘೋಷಿಸುವ ವ್ಯಕ್ತಿಗಳನ್ನು ರಾಜ್ಯದಲ್ಲಿರುವ 6 ಸ್ಥಾನಬದ್ಧತೆ ಕೇಂದ್ರದಲ್ಲಿ ಇರಿಸಲಾಗುತ್ತದೆ. ಈಗ ಅಸ್ಸಾಂನಲ್ಲಿ 938 ಮಂದಿ ಸ್ಥಾನಬದ್ಧತೆ ಕೇಂದ್ರದಲ್ಲಿದ್ದಾರೆ.

2 ವರ್ಷದಲ್ಲಿ 6ಕ್ಕೂ ಹೆಚ್ಚು ಯೋಧರಿಗೆ ನೋಟಿಸ್

ಕರ್ತವ್ಯದಲ್ಲಿರುವ ಅಥವಾ ನಿವೃತ್ತ ಯೋಧರಿಗೆ ಅಸ್ಸಾಂನಲ್ಲಿರುವ ವಿದೇಶೀಯರ ನ್ಯಾಯಮಂಡಳಿಯಿಂದ ನೋಟಿಸ್ ಬರುವುದು ಇದೇ ಮೊದಲಲ್ಲ. ಕಳೆದ 2 ವರ್ಷದಲ್ಲಿ 6ಕ್ಕೂ ಹೆಚ್ಚು ಯೋಧರು ತಮ್ಮ ಪೌರತ್ವ ಸಾಬೀತುಪಡಿಸುವಂತೆ ಸೂಚಿಸುವ ನೋಟಿಸನ್ನು ಪಡೆದಿದ್ದಾರೆ.

ಈಗಿನ ಪ್ರಕರಣದಲ್ಲಿ ಮೂವರು ಸಹೋದರರು ಇದೇ ಜಿಲ್ಲೆಯಲ್ಲಿ ತಾವು ಈ ಹಿಂದೆ ವಾಸಿಸುತ್ತಿದ್ದ ಸ್ಥಳದ ಕುರಿತು ದಾಖಲೆಯನ್ನು ಒದಗಿಸಿಲ್ಲ. ಇವರ ಪ್ರಕರಣ ಇದೀಗ ನ್ಯಾಯಮಂಡಳಿಯಲ್ಲಿ ಇತ್ಯರ್ಥಕ್ಕೆ ಬಾಕಿಯಿದ್ದು, ಸಹೋದರರಿಗೆ ನೆರವು ನೀಡಲು ನಾವು ಸಿದ್ಧ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News