ಬೀದಿನಾಯಿಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ: ಜಿಲ್ಲಾಧಿಕಾರಿ ಕೊರ್ಲಪಟಿ

Update: 2019-02-23 15:15 GMT

ಮಲ್ಪೆ, ಫೆ. 23: ಬೀದಿನಾಯಿಗಳ ರಕ್ಷಣೆ ಹಾಗೂ ಆರೈಕೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ನಮ್ಮಿಂದಾಗುವಷ್ಟು ಸಹಾಯವನ್ನು ಅವುಗಳಿಗೆ ಮಾಡ ಬೇಕು. ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ ಹೇಳಿದ್ದಾರೆ.

ಬೀದಿ ನಾಯಿಗಳ ಕುರಿತ ನಮ್ಮ ಸ್ವಂತ, ನಮ್ಮ ಹೆಮ್ಮೆ ಜಾಗೃತಿ ಅಭಿಯಾನಕ್ಕೆ ಮಲ್ಪೆ ಬೀಚ್‌ನಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಎಸೆದು ಪರಿಸರವನ್ನು ಹಾಳು ಮಾಡುವ ಬದಲು ಅದನ್ನು ಬೀದಿನಾಯಿಗಳಿಗೆ ನೀಡುವ ಮೂಲಕ ತ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.

ಬೀದಿ ನಾಯಿಮರಿಗಳಿಗೆ ಪುನವರ್ಸತಿ ಕಲ್ಪಿಸುವ ನಿಟ್ಟಿನಲ್ಲಿ ಆರಂಭಿಸಲಾದ ಮಲ್ಪೆಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ನ್ನು ಉದ್ಘಾಟಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಬೀದಿನಾಯಿಗಳಿಗೂ ಬದುಕುವ ಹಕ್ಕು ಇದೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದಿನೇ ದಿನೇ ಬೀದಿನಾಯಿ ಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಸಮಾಜದಲ್ಲಿ ಬೀದಿನಾಯಿಗಳ ಹಾಗೂ ಜನರ ನಡುವೆ ಸಂಘರ್ಷ ಉಂಟಾಗಿದೆ. ಆದುದರಿಂದ ಇವುಗಳನ್ನು ರಕ್ಷಣೆ ಮಾಡಿ ಪುನವರ್ಸತಿ ಕಲ್ಪಿಸುವುದು ಅತ್ಯಗತ್ಯ ಎಂದರು.

ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಬಬಿತಾ ಮಧ್ವರಾಜ್ ಮಾತನಾಡಿದರು. ಮಲ್ಪೆಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಉಡುಪಿ ಪೌರಾಯುಕ್ತ ಆನಂದ ಕಹ್ಳೋಲಿಕರ್, ಸ್ವಯಂ ಸೇವಕರಾದ ಸುಭಾಶ್ ಭಟ್, ಗಣೇಶ್ ನೆರ್ಗಿ, ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಮಮತಾ ಶೆಟ್ಟಿ ಸ್ವಾಗತಿಸಿದರು. ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ಬೀದಿಬದಿಯಲ್ಲಿ ರಕ್ಷಿಸ ಲ್ಪಟ್ಟ ನಾಯಿಮರಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News