ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿ: ಜಯಪ್ರಕಾಶ್ ಹೆಗ್ಡೆ

Update: 2019-02-23 15:26 GMT

ಉಡುಪಿ, ಫೆ.23: ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಮತದಾರರು ನಿರಂತರ ಜಾಗರುಕರಾಗಿರಬೇಕು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾನವಿಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಂಸದೀಯ ಪ್ರಜಾಪ್ರಭುತ್ವ -ಅಳಿವು ಉಳಿವು ಎಂಬ ಸಂವಾದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ಹೀಗೆ ಮತ ಚಲಾಯಿಸುವಾಗ ತಾವು ಆಯ್ಕೆ ಮಾಡುವ ಪ್ರತಿನಿಧಿಗಳ ಅರ್ಹತೆ ಮತ್ತು ಬದ್ಧತೆಯನ್ನು ಅರಿತು ಮತ ಚಲಾಯಿಸಬೇಕು. ಪ್ರಜಾಪ್ರಭುತ್ವ ಎಂಬುದು ಜನರ ಅಭಿಪ್ರಾಯದ ಮೇರೆಗೆ ರೂಪಿಸುವ ಸರಕಾರವಾಗಿದೆ ಎಂದು ಅವರು ತಿಳಿಸಿದರು.

ನಮಗೆ ನೇರವಾಗಿ ಶಾಸನ ಸಭೆಯಲ್ಲಿ ಕುಳಿತು ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲದಿರಬಹುದು. ಆದರೆ ಚುನಾವಣೆಯ ಸಂದರ್ಭದಲ್ಲಿ ಪರಿಣಾಮಕಾರಿಯಾದ ಜನಾಭಿಪ್ರಾಯವನ್ನು ರೂಪಿಸಲು ಸಾಧ್ಯ. ನಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳು ಕ್ಷೇತ್ರಕ್ಕೆ ಉತ್ತರದಾಯಿತ್ವವನ್ನು ಹೊಂದಿರುತ್ತಾರೆ. ಜನ ಪ್ರತಿನಿಧಿಗಳು ಮತದಾರರ ಪ್ರಭುವಿಗೆ ಜವಾಬ್ದಾರರಾಗಿದ್ದಾರೆ ಎಂದರು.

ನಾವು ನಿಷ್ಕ್ರೀಯರಾಗಿ ನಮ್ಮ ಹಕ್ಕನ್ನು ಚಲಾಯಿಸದೆ ಕೇವಲ ರಾಜಕಾರಣಿ ಗಳನ್ನು ದೂರಿದರೆ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಈಗ ಇರುವ ಪದ್ಧತಿಗಳಲ್ಲಿ ಸಂಸದೀಯ ಪದ್ಧತಿಯು ಭಾರತಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಅಧ್ಯಕ್ಷೀಯ ಪದ್ಧತಿಯಲ್ಲಿ ಅವಧಿ ಮುಗಿಯುವವರೆಗೆ ಅಧ್ಯಕ್ಷನನ್ನು ಅಧಿಕಾರ ದಿಂದ ವಜಾಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಸಂಸದೀಯ ಪ್ರಜಾಪ್ರಭುತ್ವವನ್ನು ಮಾದರಿ ಪ್ರಜಾಪ್ರಭುತ್ವವನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ಸಂಘದ ಸಂಚಾಲಕ ಎನ್ ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಚಾಲಕ ಸೋಜನ್ ಕೆ.ಜಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News