ಫೆ. 24: ಅಂಚೆ ನೌಕರರ 11ನೇ ಫೆಡರಲ್ ಕಾಂಗ್ರೆಸ್

Update: 2019-02-23 16:23 GMT

 ಉಡುಪಿ, ಫೆ.23: ಉಡುಪಿ ವಿಭಾಗೀಯ ಅಂಚೆ ನೌಕರರ ಸಂಘಗಳ ಆಶ್ರಯದಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘಗಳ ಪರಮೋಚ್ಚ ಸಂಸ್ಥೆ ರಾಷ್ಟ್ರೀಯ ಅಂಚೆ ನೌಕರರ ಸಂಘಟನೆಗಳ ಒಕ್ಕೂಟದ 11ನೇ ಫೆಡರಲ್ ಕಾಂಗ್ರೆಸ್ ನಾಳೆಯಿಂದ ಎರಡು ದಿನಗಳ ಕಾಲ ಉಡುಪಿಯಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೆ. ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಅಪರಾಹ್ನ 3:00ಗಂಟೆಗೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ಇರುವ ಹೊಟೇಲ್ ಮಥುರಾ ಕಂಫರ್ಟ್‌ನ ಜಯಕೃಷ್ಣ ಸಭಾಭವನದಲ್ಲಿ ಪ್ರಾರಂಭಗೊಳ್ಳುವ ಸಮ್ಮೇಳನವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ ಎಂದರು.

ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಹೊಸದಿಲ್ಲಿಯ ಎನ್.ಕೆ.ತ್ಯಾಗಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಅರುಂದತಿ ಘೋಷ್, ಡಾ.ಚಾರ್ಲ್ಸ್ ಲೋಬೊ, ಎಸ್.ರಾಜೇಂದ್ರಕುಮಾರ್, ವೀಣಾ ಶ್ರೀನಿವಾಸನ್, ಕ.ಅರವಿಂದ್ ವರ್ಮ ಅಲ್ಲದೇ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದರು.

ಕಳೆದ ವರ್ಷ ಕೊಲ್ಕತ್ತಾದಲ್ಲಿ ನಡೆದ ಫೆಡರಲ್ ಕಾಂಗ್ರೆಸ್ ಸಭೆ ಇದೇ ಮೊದಲ ಬಾರಿ ಉಡುಪಿಯಲ್ಲಿ ನಡೆಯುತ್ತಿದೆ. 150 ವರ್ಷಗಳ ಇತಿಹಾಸವುಳ್ಳ ಅಂಚೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸುರೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಮಾಧವ ಅಡಿಗ, ಜನಾರ್ದನ್, ಎನ್.ಎ.ನೇಜಾರ್, ಅಶ್ವತ್‌ಕುಮಾರ್, ಪ್ರವೀಣ್ ಹಾಗೂ ಬಾಲಚಂದ್ರ ಕೆ.ಆರ್.ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News